Advertisement
ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಅನೇಕ ಸರಕಾರಿ ಶಾಲೆಗಳ ಕಟ್ಟಡಗಳಲ್ಲಿ ವಿವಿಧ ದುರಸ್ತಿ, ಅಭಿವೃದ್ಧಿ ಕಾಮಗಾರಿ ಅಗತ್ಯವಿದೆ. ಬೇಸಿಗೆ ರಜೆಯಲ್ಲಿಯೇ ಇದನ್ನು ಕೈಗೊಳ್ಳಬೇಕಿತ್ತಾದರೂ ಇದೀಗ ಶಾಲೆ ಆರಂಭವಾದ ಮೇಲೆ ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿದೆ. ಹಳೇ ಕಟ್ಟಡ, ಮಳೆಯಿಂದಾಗಿ ಶಾಲಾ ಕಟ್ಟಡಗಳಲ್ಲಿ ಕೆಲವೊಂದು ಕೋಣೆಗಳ ಮೇಲ್ಛಾವಣಿ, ಹೊರಗೋಡೆ, ಬಣ್ಣ ಹಚ್ಚುವುದು ಇತ್ಯಾದಿ ಕಾಮಗಾರಿ ಕೈಗೊಳ್ಳಬೇಕಾಗಿದೆ.
Related Articles
Advertisement
ಶಿವಶಂಕರ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿ ನೆಲಹಾಸು ಕುಸಿಯುತ್ತಿರುವುದರ ಕಾಮಗಾರಿಗೆ 2 ಲಕ್ಷ ರೂ.ಗಳು, ಶಿರಡಿ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಮೇಲ್ಛಾವಣಿ ದುರಸ್ತಿ, ಶೌಚಾಲಯ ದುರಸ್ತಿ ಕಾಮಗಾರಿಗೆ 4ಲಕ್ಷ ರೂ.ಗಳು, ಛಬ್ಬಿ ಪ್ಲಾಟ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 3 ಕೊಠಡಿಗಳ ವರಾಂಡ ಮತ್ತು ಕೊಠಡಿ ಮೇಲ್ಛಾವಣಿ, ಕಿಟಕಿ ಬಾಗಿಲು ಕಾಮಗಾರಿಗೆ 3ಲಕ್ಷ ರೂ. ಗಳು, ಆನಂದನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ ಶೌಚಾಲಯ ದುರಸ್ತಿ ಹಾಗೂ ಬಣ್ಣ ಹಚ್ಚುವುದು ಅದಕ್ಕಾಗಿ 5 ಲಕ್ಷ ರೂ.ಗಳು.
ಯಲ್ಲಾಪುರ ಓಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-18ರಲ್ಲಿ 3 ಕೊಠಡಿಗಳ ಮೇಲ್ಛಾವಣಿ ಗೋಡೆ ದುರಸ್ತಿ ಕಾಮಗಾರಿಗೆ 3 ಲಕ್ಷ ರೂ.ಗಳು, ಸದಾಶಿವ ನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿಗೆ 2 ಲಕ್ಷ ರೂ., ಎಸ್ ಆರ್‌ಪಿ ಕೇಂದ್ರ 3 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ ಕಾಮಗಾರಿಗೆ 5 ಲಕ್ಷ ರೂ.ಗಳು ಹೀಗೆ ಒಟ್ಟು 74 ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡುವಂತೆ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಬೇಡಿಕೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ನಂತರ ಕಾಮಗಾರಿ ಆರಂಭಿಸಲು ಇಲಾಖೆ ಸಿದ್ಧತೆ ನಡೆಸಿದೆ. ನಗರದಲ್ಲಿ ಹಲವು ಶಾಲೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಸಬೇಕಿದ್ದು, ಹಂತ ಹಂತವಾಗಿ ಕೈಗೆತ್ತಿಕೊಳ್ಳಬೇಕಿದೆ. ಅದಕ್ಕಾಗಿ ಮೊದಲನೇ ಹಂತದಲ್ಲಿ 16 ಶಾಲೆಗಳನ್ನು ಗುರುತಿಸಲಾಗಿದ್ದು, ಸರಕಾರದಿಂದ ಅನುದಾನ ಬಿಡುಗಡೆ ನಂತರ ಕಾಮಗಾರಿ ಆರಂಭಗೊಳ್ಳಬೇಕಿದ್ದು, ಅದಕ್ಕಾಗಿ ಕ್ಷೇತ್ರ ಶಿಕ್ಷಣ ಕಾರ್ಯಾಲಯ ಕಾಯುತ್ತಿದೆ.
ಮೊದಲ ಹಂತದಲ್ಲಿ ಸುಮಾರು 16 ಶಾಲೆಗಳನ್ನು ಗುರುತಿಸಲಾಗಿದ್ದು, ಆದ್ಯತೆ ಮೇರೆಗೆ 2ನೇ ಹಂತದಲ್ಲಿ ಇನ್ನುಳಿದ ಶಾಲೆಗಳ ಕಾಮಗಾರಿಗೆ ಬೇಡಿಕೆ ಸಲ್ಲಿಸಲಾಗುವುದು. ಸದ್ಯ 16 ಶಾಲೆಗಳಿಗಾಗಿ 74 ಲಕ್ಷ ರೂ. ಗಳ ಅನುದಾನ ಬಿಡುಗಡೆಗೆ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದು, ಇಲಾಖೆ ಅನುದಾನ ಬಿಡುಗಡೆ ಮಾಡಿದ ನಂತರ ಕಾಮಗಾರಿ ಆರಂಭಿಸಲಾಗುವುದು. –ಎಂ.ಎಸ್.ಶಿವಳ್ಳಿಮಠ, ಪ್ರಭಾರ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ
ಬಸವರಾಜ ಹೂಗಾರ