ಬೆಂಗಳೂರು: ಯಾವುದೇ ಒತ್ತಡಕ್ಕೆ ಮಣಿಯದೇ ಬೆಂಗಳೂರಿನ ರಾಜಕಾಲುವೆ ತೆರವು ಮಾಡಲಾಗುವುದು. ಕಾಲಮಿತಿಯಲ್ಲಿ 1800 ಕೋಟಿ ರೂ. ವೆಚ್ಚದಲ್ಲಿ ರಾಜ ಕಾಲುವೆ ಅಭಿವೃದ್ಧಿಪಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಂಗಳೂರು ನಗರದಲ್ಲಿ 850 ಕಿಮೀ ರಾಜಕಾಲುವೆ ಇದೆ. ಈ ಪೈಕಿ 450 ಕಿಮೀ ಅಭಿವೃದ್ಧಿಗೆ ಬಾಕಿಯಿದೆ. ಕಳೆದ ಬಾರಿ 1500 ಕೋಟಿ ರೂ.ನ್ನು ರಾಜಕಾಲುವೆ ಅಭಿವೃದ್ಧಿಗೆ ಮೀಸಲಿಟ್ಟಿದ್ದೆವು. ಈ ಬಾರಿ ಮತ್ತೆ ಹೆಚ್ಚುವರಿಯಾಗಿ 300 ಕೋಟಿ ರೂ. ನೀಡುತ್ತೇವೆ. ರಾಜಕಾಲುವೆ ಅಭಿವೃದ್ಧಿಯನ್ನು ನಾವು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಎರಡು ವರ್ಷದಲ್ಲಿ ನಾವು ಈ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:“ನೀರು ಕೊಡೋ ಮಗನೇ” ಎಂದು ಏಕವಚನದಲ್ಲಿ ಕೇಳಿದ್ದಕ್ಕೆ ಚೂರಿ ಇರಿದು ಕೊಲೆ
ಬೆಂಗಳೂರಿನ ಎಂಟು ವಿಭಾಗಗಳ ಪೈಕಿ ಎರಡು ಕಡೆ ಮಾತ್ರ ರಾಜಕಾಲುವೆ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಬೆಂಗಳೂರಿನ ಒಟ್ಟು ಹೊರ ಹೋಗುವ ನೀರಿನ ಪೈಕಿ ಶೇ.80 ರಷ್ಟು ಹಾದು ಹೋಗುತ್ತದೆ. 69 ಕೆರೆ ಇಲ್ಲಿದೆ. ಹೀಗಾಗಿ ಸಮಸ್ಯೆ ಹೆಚ್ಚಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾಮಗಾರಿಯನ್ನು ಯಾವುದೇ ಒತ್ತಡಕ್ಕೆ ಒಳಗಾಗದೇ ನಾವು ಮಾಡುತ್ತೇವೆ. ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗುವುದಕ್ಕೆ ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿದರು.