Advertisement

ಪಾಳು ಬಿದ್ದಿದ್ದ ಪರವಾಸು ದೇಗುಲಕ್ಕೆ ಕಾಯಕಲ್ಪ

01:34 PM Sep 22, 2020 | Suhan S |

ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಶ್ರೀ ಪರವಾಸು ದೇವಾಲಯದ ಅಭಿವೃದ್ಧಿಗೆ ಇದೀಗ ಕಾಲ ಕೂಡಿಬಂದಿದೆ. ಪಾಳು ಬಿದ್ದಿದ್ದ ಐತಿಹಾಸಿಕ ಪರವಾಸು ದೇವಸ್ಥಾನಕ್ಕೆ ಕಾಯಕಲ್ಪ ನೀಡಲು ಮುಜರಾಯಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಈ ದೇವಾಲಯವನ್ನು 17ನೇ ಶತಮಾನದಲ್ಲಿ ಮೈಸೂರು ಅರಸರಾದ ಚಿಕ್ಕದೇವ ರಾಯರ ಕಾಲದಲ್ಲಿ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ದೇಶದಲ್ಲಿ ಪ್ಲೇಗ್‌ ರೋಗವು ಆವರಿಸಿಕೊಂಡ ಸಂದರ್ಭದಲ್ಲಿ ಅರ್ಚಕರು ಇಲ್ಲಿನ ವಿಗ್ರಹಗಳನ್ನು ಪಟ್ಟಣದ ಹೃದಯ ಭಾಗದಲ್ಲಿರುವ ವಿಜಯ ನಾರಾಯಣಸ್ವಾಮಿ ದೇವಾಲಯಕ್ಕೆ ಸ್ಥಳಾಂತರಿಸಿದ್ದರು. ನಂತರದ ದಿನಗಳಲ್ಲಿ ಪಟ್ಟಣದ ಹೊರವಲಯ ದಲ್ಲಿದ್ದ ದೇವಾಲಯವು ನಿರ್ವಹಣೆ ಕೊರತೆ ಹಾಗೂ ಪೂಜೆ ಇಲ್ಲದ ಕಾರಣ ಪಾಳು ಬಿದ್ದಿತ್ತು. ಕುಸಿದು ಬೀಳುವ ಸ್ಥಿತಿಯಲ್ಲಿದ್ದ ದೇವಾಲಯ ವನ್ನು 2010ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅಮರ ನಾರಾಯಣ ಮುಜರಾಯಿ ಇಲಾಖೆ ವತಿಯಿಂದ ಜೀರ್ಣೊದ್ಧಾರಗೊಳಿಸಿಸುತ್ತಲೂ ಕಬ್ಬಿಣದ ತಂತಿ ಬೇಲಿ ಹಾಕಿಸಿ ಸಂರಕ್ಷಿಸಿದ್ದರು.

ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ದಿ. ಎಚ್‌.ಎಸ್‌.ಮಹದೇವಪ್ರಸಾದ್‌ ದೇವಾಲಯದ ಪಕ್ಕದಲ್ಲೇ ಇರುವ ಹಿಂದು ರುದ್ರಭೂಮಿಯನ್ನು ಬೇರೆಡೆಗೆ ಸ್ಥಳಾಂತರಿಸಿ ದೇವಾಲಯ ಮತ್ತಷ್ಟು ಜೀರ್ಣೊದ್ಧಾರ ಗೊಳಿಸಲು ನಿರ್ಧರಿಸಿದ್ದರು. ಆದರೆ, ಜಿಲ್ಲಾಧಿಕಾರಿ ಅಮರನಾರಾಯಣ್‌ ಅವರ ವರ್ಗಾವಣೆಯಿಂದ ಕಾಮಗಾರಿ ಅಪೂರ್ಣಗೊಂಡಿತು.

ಸುಂದರ ಉದ್ಯಾನ: ಪುರಾತನ ಪರವಾಸು ದೇವಸ್ಥಾನ ಪ್ರವೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆಸಿ, ದೇವಸ್ಥಾನದ ಸುತ್ತಲೂ ಸ್ವತ್ಛತಾ ಕಾರ್ಯ ಕೈಗೊಂಡಿರುವ ಅಧಿಕಾರಿಗಳು ಸುಂದರ ಉದ್ಯಾನ ನಿರ್ಮಿಸಿ ಪಟ್ಟಣದ ಪ್ರಮುಖ ಆಕರ್ಷಕ ಕೇಂದ್ರ ಮಾಡಲು ಕಾರ್ಯೊನ್ಮುಖರಾಗಿದ್ದಾರೆ. ಈ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಪಾಳು ಬಿದ್ದಿದ್ದ ದೇವಸ್ಥಾನವನ್ನು ನವೀಕರಿಸಲಾಗಿದ್ದರೂ ಮೂಲಗ್ರಹಗಳ ಪ್ರತಿಷ್ಠಾಪನೆ ಮಾಡದ ಪರಿಣಾಮ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತು ದೇವಸ್ಥಾನವನ್ನೇ ಆವರಿಸಿಕೊಂಡಿತ್ತು.

ಚಾಲನೆ: ಈ ಹಿನ್ನೆಲೆಯಲ್ಲಿ ಮುಜರಾಯಿ ಅಧಿಕಾರಿಯೂ ಆದ ತಹಶೀಲ್ದಾರ್‌ ಎಂ.ನಂಜುಂಡಯ್ಯ ಪುರಾತತ್ವ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಜೀರ್ಣೊದ್ಧಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಲಕಾಡಿನ ವೈದ್ಯೆಶ್ವರ ದೇವಸ್ಥಾನದ ಪ್ರತಿರೂಪದಲ್ಲಿರುವ ಪರವಾಸು ದೇವಸ್ಥಾನ ಸಂರಕ್ಷಣೆಗೆ ಪುರಸಭೆಯ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಳೆದೆರಡು ದಿನಗಳಿಂದ ತೆರವುಗೊಳಿಸಿದ್ದಾರೆ. ಈ ಕಾರ್ಯವನ್ನು ಸ್ವತ: ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಭೇಟಿ ನೀಡಿ ಪರಿಶೀಲಿಸಿದ್ದರು.

Advertisement

ಉದ್ಯಾನ,ಕಾರಂಜಿ ನಿರ್ಮಾಣಕ್ಕೆ ಕ್ರಮ :  ಪರವಾಸು ದೇವಾಲಯದ ಸುತ್ತಲೂ ಬೇಲಿ ಹಾಕಿ ಸುಂದರ ಉದ್ಯಾನ ನಿರ್ಮಾಣ ಮಾಡಿ ಸಂಜೆ ವಾಯುಹಾರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ಪರಿಸರ ದೊರಕುವಂತೆ ಮಾಡಲಾಗುವುದು. ದೇವಾಲಯದ ಪಕ್ಕದಲ್ಲೇ ಇರುವ ಕಲ್ಯಾಣಿ ಕೊಳಕ್ಕೆ ನೀರು ತುಂಬಿಸಿ ಮಧ್ಯದಲ್ಲಿ ಕಾರಂಜಿ ನಿರ್ಮಿಸಿ ಆಕರ್ಷಕ ಗೊಳಿಸಲು ಉದ್ದೇಶಿಸಲಾಗಿದೆ ಎಂದು ತಹಶೀಲ್ದಾರ್‌ ಎಂ.ನಂಜುಂಡಯ್ಯ ತಿಳಿಸಿದ್ದಾರೆ.

ಭಕ್ತರು ಸಹಕರಿಸಿದರೆ ಮೂಲ ಸ್ಥಾನಕ್ಕೆ ವಿಗ್ರಹ :ಸದ್ಯ ಪರವಾಸು ದೇವರ ವಿಗ್ರಹವನ್ನು ಗುಂಡ್ಲುಪೇಟೆ ಪಟ್ಟಣದ ವಿಜಯನಾರಾಯಣಸ್ವಾಮಿ ದೇವಾಲಯದಲ್ಲಿ ಇರಿಸಲಾಗಿದೆ. ಪರವಾಸು ದೇವಾಲಯಕ್ಕೆ ಸೇರಿದ ಭೂಮಿಯನ್ನು ಸರ್ವೆ ನಡೆಸಿ ಸಂರಕ್ಷಣೆ ನಡೆಸಲಾಗುವುದು. ಸಾರ್ವಜನಿಕರು ಹಾಗೂ ಭಕ್ತರು ಸಹಕರಿಸಿದರೆ ಪರವಾಸು ದೇವರ ವಿಗ್ರಹವನ್ನು ಮೂಲ ಸ್ಥಾನಕ್ಕೆ ಮರಳಿಸಲು ತೀರ್ಮಾನಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಎಂ.ನಂಜುಂಡಯ್ಯ ಹೇಳಿದ್ದಾರೆ.

 

ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next