Advertisement

“ಸ್ಮಾರ್ಟ್‌ಸಿಟಿ ಸ್ವರೂಪದಲ್ಲಿ ನಗರದ ಎಲ್ಲ ವಾರ್ಡ್‌ಗಳ ಅಭಿವೃದ್ಧಿ’

11:34 PM Feb 28, 2020 | mahesh |

ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಬಿಜೆಪಿಯ ಹಿರಿಯ ಸದಸ್ಯ ದಿವಾಕರ ಪಾಂಡೇಶ್ವರ ಅವರು ಆಯ್ಕೆಯಾಗಿದ್ದಾರೆ. 46ನೇ ಕಂಟೋನ್ಮೆಂಟ್‌ ವಾರ್ಡ್‌ನಿಂದ ನಿರಂತರವಾಗಿ ಮೂರು ಬಾರಿ ಆಯ್ಕೆಯಾಗಿರುವ ದಿವಾಕರ ಅವರು ಕ್ರಿಯಾಶೀಲ ಹಾಗೂ ಜನಸ್ನೇಹಿ ಕಾರ್ಪೊರೇಟರ್‌ ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವರ್ಷದಿಂದ ಮಹಾನಗರ ಪಾಲಿಕೆಯ ಮೇಯರ್‌ ಹುದ್ದೆ ತೆರವಾಗಿದ್ದು, ಇದೀಗ ನೂತನ ಮೇಯರ್‌ ಆಗಿ ದಿವಾಕರ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಕುಡಿಯುವ ನೀರು, ರಸ್ತೆ, ಸ್ಮಾರ್ಟ್‌ಸಿಟಿ, ಪಾರ್ಕಿಂಗ್‌, ತ್ಯಾಜ್ಯ ನಿರ್ವಹಣೆ ಸಹಿತ ಅನೇಕ ಸವಾಲುಗಳು ಅವರ ಮುಂದಿದ್ದು, ಈ ಬಗ್ಗೆ “ಉದಯವಾಣಿ ಸುದಿನ’ದ ಜತೆಗೆ ದಿವಾಕರ ಪಾಂಡೇಶ್ವರ ಅವರು ಮಾತನಾಡಿದ್ದಾರೆ.

Advertisement

ನಗರದ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು ?
ಪ್ರತೀ ವಾರ್ಡ್‌ ಅಭಿವೃದ್ಧಿಯಾಗಬೇಕು ಎಂಬುದು ಮೊದಲ ಆದ್ಯತೆಯಾಗಿದೆ. ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಹಲವು ವಿಷಯಗಳನ್ನು ಉಲ್ಲೇಖೀಸಿದೆ. ಇದರ ಜಾರಿ ಸಂಬಂಧ ಶೀಘ್ರದಲ್ಲಿ ಸಂಸದರು, ಶಾಸಕರ ಹಾಗೂ ಪಕ್ಷದ ಪ್ರಮುಖರ ಜತೆಗೆ ಮಾತುಕತೆ ನಡೆಸಿ, ನಾಗರಿಕರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಸದ್ಯ ಸ್ಮಾರ್ಟ್‌ಸಿಟಿ ಯೋಜನೆ ನಡೆಯುತ್ತಿದ್ದು, ಇದಕ್ಕೆ ವೇಗ ನೀಡಲು ಏನೆಲ್ಲ ಕ್ರಮ ಕೈಗೊಳ್ಳುತ್ತೀರಿ?
ನಗರದ 7-8 ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ನಡೆಯುತ್ತಿದ್ದು, ಅದು ಪೂರ್ಣವಾಗಿ ಸಾಕಾರಗೊಂಡರೆ ಈ ಎಲ್ಲ ವಾರ್ಡ್‌ಗಳು ಅತ್ಯಪೂರ್ವವಾಗಿ ಅಭಿವೃದ್ಧಿಯಾಗಲಿವೆ. ಆದರೆ ಉಳಿದ ವಾರ್ಡ್‌ಗಳಿಗೆ ಈ ಅವಕಾಶ ಇಲ್ಲ ಎಂಬುದು ಆ ವಾರ್ಡ್‌ನವರ ಆಕ್ಷೇಪ. ಹೀಗಾಗಿ ಸ್ಮಾರ್ಟ್‌ಸಿಟಿ ಸ್ವರೂಪವನ್ನು ನಗರದ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸುವ ಅಗತ್ಯವಿದೆ. ಇದಕ್ಕಾಗಿ ಸರಕಾರದಿಂದ ಬರುವ ಬೇರೆ ಬೇರೆ ಅನುದಾನವನ್ನು ಸ್ಮಾರ್ಟ್‌ಸಿಟಿ ಇರುವ ವಾರ್ಡ್‌ ಹೊರತುಪಡಿಸಿ, ಉಳಿದ ವಾರ್ಡ್‌ಗಳಿಗೆ ಮುಖ್ಯ ಆದ್ಯತೆಯಲ್ಲಿ ಹಂಚಿಕೆಗೆ ಪ್ರಾಮುಖ್ಯ ನೀಡಲಾಗುವುದು.

ನಗರದ ಬಹುನಿರೀಕ್ಷಿತ ಎಡಿಬಿ 2ನೇ ಹಂತದ ಯೋ ಜನೆ ಸಮರ್ಪಕ ಅನುಷ್ಠಾನಕ್ಕೆ ಏನು ಕ್ರಮ ಕೈಗೊಳ್ಳುವಿರಿ?
ಎಡಿಬಿ ಎರಡನೇ ಹಂತ ಮಂಗಳೂರಿನ ಭವಿಷ್ಯದ ದೃಷ್ಟಿ ಯಿಂದ ಅತ್ಯಂತ ಮಹತ್ವದ ಯೋಜನೆ. ಇದರಲ್ಲಿ ಕೊಂಚ ಲೋಪವಾದರೂ ಮುಂದೆ ಸಮಸ್ಯೆ ಆಗುತ್ತದೆ. ಹೀಗಾಗಿ ಪ್ರಾರಂಭದಲ್ಲೇ ಇದನ್ನು ಪರಿಣಾಮಕಾರಿಯಾಗಿ ಮಾಡಲು ಪ್ರಯತ್ನಿಸಲಾಗುವುದು. ಶೀಘ್ರ ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಚನೆ ನೀಡಲಾಗುವುದು.

ನಿಮ್ಮ ಆಡಳಿತಾವಧಿಯಲ್ಲಿ ಯಾವ ಅಂಶಗಳಿಗೆ ವಿಶೇಷ ಆದ್ಯತೆ ನೀಡುವಿರಿ?
ನೀರಿನ ದರ ಏರಿಕೆ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಜತೆಗೆ ಘನತ್ಯಾಜ್ಯದ ಮೇಲಿನ ಶುಲ್ಕ ಹೆಚ್ಚು ಮಾಡಿರುವುದಕ್ಕೆ ಜನರ ಆಕ್ಷೇಪ ಕೇಳಿಬಂದಿದೆ. ಹೀಗಾಗಿ ಶಾಸಕರು, ಸಂಸದರ ಜತೆಗೆ ಮಾತನಾಡಿ, ಅಧಿಕಾರಿಗಳ ಜತೆಗೆ ಚರ್ಚಿಸಿ ಇದನ್ನು ಕಡಿಮೆ ಮಾಡುವ ಬಗ್ಗೆ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಪ್ರತೀ ದಿನ ಐದು ವಾರ್ಡ್‌ಗಳಿಗೆ ಭೇಟಿ ನೀಡುವ ಯೋಚನೆಯಿದೆ. ಜತೆಗೆ ಬೆಂಗಳೂರಿನಲ್ಲಿ ಇದ್ದ ಹಾಗೆ ಮೆಟ್ರೋ ವ್ಯವಸ್ಥೆ ಮಂಗಳೂರಿನಲ್ಲಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗುವುದು.

Advertisement

ಸಂಚಾರ ದಟ್ಟಣೆ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಪರಿಹಾರವೇನು?
ನಗರ ಬೆಳೆಯುತ್ತಿದ್ದಂತೆ ಸಂಚಾರ ದಟ್ಟಣೆ ಸಮಸ್ಯೆಯೂ ಬಹುವಾಗಿ ಕಾಡುತ್ತದೆ. ಹೀಗಾಗಿ ಭವಿಷ್ಯವನ್ನು ದೃಷ್ಟಿಯ ಲ್ಲಿಟ್ಟು ಇದಕ್ಕೆ ಪರಿಹಾರ ಹುಡುಕಬೇಕು. ನಗರ ಸಂಚಾರಿ ವಿಭಾಗದ ಅಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

ಮಂದಾರ ಸಂತ್ರಸ್ತರಿಗೆ ಪುನರ್ವಸತಿ
ತ್ಯಾಜ್ಯ ನಿರ್ವಹಣೆ ಮಂಗಳೂರಿನಲ್ಲಿ ಸಂಪೂರ್ಣವಾಗಿ ಸುಧಾರಣೆ ಆಗಬೇಕಿದೆ. ಶಾಶ್ವತ ಪರಿಹಾರ ಇದಕ್ಕೆ ದೊರೆಯಬೇಕು. ಯಾವ ರೀತಿಯಲ್ಲಿ ಇದನ್ನು ಪರಿಹರಿಸಬಹುದು ಎಂಬ ಬಗ್ಗೆ ವಿಶೇಷ ಅಧ್ಯಯನ ಅಗತ್ಯ. ಪಚ್ಚನಾಡಿಯ ತ್ಯಾಜ್ಯ ಹರಿದು ಮಂದಾರದಲ್ಲಿ ಭಾರೀ ಸಮಸ್ಯೆಯೇ ಉಂಟಾಗಿದೆ. ಹೀಗಾಗಿ ಅಲ್ಲಿನವರು ಶಾಶ್ವತ ಪುನರ್ವಸತಿಗೆ ಆಗ್ರಹಿಸುತ್ತಿದ್ದಾರೆ. ಮುಂದಿನ ವಾರ ಮಂದಾರಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ತಿಳಿದು ಸೂಕ್ತ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು.

ವಾರ್ಡ್‌ ಸಮಿತಿ ರಚನೆಗೆ ಆದ್ಯತೆ
ವಾರ್ಡ್‌ಗಳ ಅಭಿವೃದ್ಧಿಗೆ ವಾರ್ಡ್‌ ಸಮಿತಿ ಹೆಚ್ಚು ಸೂಕ್ತ. ಪಾಲಿಕೆ ಚುನಾವಣೆ ವೇಳೆ ಬಿಜೆಪಿಯು ವಾರ್ಡ್‌ ಸಮಿತಿ ರಚನೆ ಮಾಡುವ ಬಗ್ಗೆ ಉಲ್ಲೇಖ ಮಾಡಿತ್ತು. ಇದರಂತೆಯೇ ಸಮಿತಿ ರಚಿಸಲು ನನ್ನ ಆಡಳಿತದಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ಶಾಸಕರು, ಸಂಸದರು, ನಾಗರಿಕರ ಜತೆಗೆ ಚರ್ಚಿಸಿ ವಾರ್ಡ್‌ ಸಮಿತಿಯ ಸ್ವರೂಪವನ್ನು ನಿರ್ಧರಿಸಲಾಗುವುದು. ಈ ಮೂಲಕ ನಾಗರಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಲಾಗುವುದು.

ಪಾಲಿಕೆ ಸೇವೆ ಆನ್‌ಲೈನ್‌
ಸ್ಮಾರ್ಟ್‌ಸಿಟಿ ಮಂಗಳೂರು ಎಂಬ ಹೆಸರು ಇದ್ದರೂ ಪಾಲಿಕೆಯ ಎಲ್ಲ ಸೇವೆಗಳು ಆನ್‌ಲೈನ್‌ ಮೂಲಕ ಸಿಗುತ್ತಿಲ್ಲ ಎಂಬ ಆರೋಪವಿದೆ. ಆನ್‌ಲೈನ್‌ ವ್ಯವಸ್ಥೆ ಇದ್ದರೂ ಅದು ಎಲ್ಲ ಹಂತದಲ್ಲಿಯೂ ಜಾರಿಯಾಗಿಲ್ಲ. ಇದರಿಂದ ಸಾರ್ವಜನಿಕರು ದಲ್ಲಾಳಿಗಳ ಹತ್ತಿರ ಹೋಗುತ್ತಿದ್ದಾರೆ ಎಂಬ ಮಾಹಿತಿಯಿದೆ.
ಇದಕ್ಕಾಗಿ ಪಾಲಿಕೆಯನ್ನು ಸಮಗ್ರವಾಗಿ ಆನ್‌ಲೈನ್‌ ಸ್ವರೂಪಕ್ಕೆ ಬದಲಾಯಿಸಬೇಕಿದೆ. ಕೇಂದ್ರ, ರಾಜ್ಯ ಸರಕಾರ ಬಿಜೆಪಿಯದ್ದಾಗಿರುವುದರಿಂದ ಪಾಲಿಕೆಯನ್ನು ಆನ್‌ಲೈನ್‌ ಮೂಲಕ ಬದಲಾಯಿಸಿ ಜನರ ಹತ್ತಿರ ಸೇವೆ ನೀಡಲು ಕ್ರಮ ವಹಿಸಲಾಗುವುದು.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next