ಯಳಂದೂರು: ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರಿಗೆ ಅವಶ್ಯವಿರುವ ಕಾಮಗಾರಿಗಳನ್ನು ಜನರಿಂದ ಪಟ್ಟಿ ಮಾಡಿ, ಅವುಗಳ ಅಭಿವೃದ್ಧಿ ಪಡಿಸುವುದು ನಮ್ಮ ಗ್ರಾಮ ನಮ್ಮ ಯೋಜನೆ ಉದ್ದೇಶವಾಗಿದೆ ಎಂದು ಪಿಡಿಒ ರವೀಂದ್ರನಾಥ್ ತಿಳಿಸಿದರು.
ತಾಲೂಕಿನ ಮದ್ದೂರು ಗ್ರಾಮದಲ್ಲಿ ಸೋಮವಾರ ನಡೆದ ನಮ್ಮ ಗ್ರಾಮ ನಮ್ಮ ಯೋಜನೆ 2020-21ನೇ ಸಾಲಿನ ಹಾಗೂ ಮಿಷನ್ ಅಂತ್ಯೋದಯ ಹಾಗೂ ತ್ಯಾಜ್ಯಾ ವಿಲೇವಾರಿ ಗ್ರಾಮ ಸಭೆಯಲ್ಲಿ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯ ಮಲ್ಲಿಗೆಹಳ್ಳಿ, ಮದ್ದೂರು, ಬೂದಿತಿಟ್ಟು ಸೇರಿದ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಒಕ್ಕಣೆ ಕಣ, ಕೆರೆ, ಕಟೆ ಅಭಿವೃದ್ಧಿ ಸೇರಿದಂತೆ ವೈಯಕ್ತಿಕ ಸೌಲಭ್ಯಗಳಾದ ಶೌಚಗೃಹ,
ದನ, ಕುರಿ ಕೊಟ್ಟಿಗೆ, ಭೂ ಮಟ್ಟ, ರೇಷ್ಮೆ ಕೃಷಿ, ಮಾವು, ತೆಂಗು, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳಾದ ಬಾಳೆ, ಪಪ್ಪಾಯಿ, ಬೆಳೆಗಳು ಹಾಗೂ ಅರಣ್ಯ ಇಲಾಖೆಯಿಂದ ಕೃಷಿ ಅರಣ್ಯ ಅಭಿವೃದ್ಧಿಪಡಿಸುವ ಬಗ್ಗೆ ಜನರಿಂದ ಪಟ್ಟಿ ಮಾಡಿ ಆ ಕೆಲಸಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಮಾತನಾಡಿ, ಜನರು ಗ್ರಾಮ ಸಭೆಗಳಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಸೌಲಭ್ಯದ ಅರಿವಾಗುತ್ತದೆ. ನರೇಗಾ ಯೋಜನೆಯಲ್ಲಿ ಪಂಚಾಯ್ತಿಗೆ ಸಾಕಷ್ಟು ಅನುದಾನಗಳು ಬರುತ್ತಿದೆ. ವೈಯಕ್ತಿಕ ಹಾಗೂ ಸಾಮೂಹಿಕ ಕೆಲಸಗಳ ಪಟ್ಟಿ ಮಾಡಿ ನೀಡಿದರೆ, ಅವುಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು. ಪ್ಲಾಸ್ಟಿಕ್ ಪದಾರ್ಥಗಳ ಖರೀದಿಸುವುದು ಹಾಗೂ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಜನರು ಒಣ ಮತ್ತು ಹಸಿ ಕಸಗಳನ್ನು ಬೇರ್ಪಡಿಸಿ ಪಂಚಾಯ್ತಿ ಗುರುತಿಸಿರುವ ಜಾಗದಲ್ಲಿ ಹಾಕುವ ಮೂಲಕ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ಸದಸ್ಯರಾದ ನಾಗರಾಜು, ಮಹದೇವ, ಸಂದೀಪ್, ಪಿ.ಮಹದೇವ, ಪುಪ್ಪಲತ, ಚಂದ್ರಕಲಾ, ಕಾರ್ಯದರ್ಶಿ ಎಸ್. ನಂಜಪ್ಪ. ಪ್ರಸನ್ನ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.