Advertisement

ರಾಜ್ಯದ ಅಭಿವೃದ್ಧಿಯೇ ಮೈತ್ರಿ ಸಂಕಲ್ಪ

05:43 AM Jan 27, 2019 | Team Udayavani |

ಬೆಳಗಾವಿ: ರಾಜ್ಯದ ಸಮಗ್ರ ಅಭಿವೃದ್ಧಿ ಸಮ್ಮಿಶ್ರ ಸರಕಾರದ ಸಂಕಲ್ಪ. ನಾವು ನಮ್ಮ ಸಾಧನೆ ಹಾಗೂ ವೈಫಲ್ಯಗಳನ್ನು ತುಲನಾತ್ಮಕವಾಗಿ ಅವಲೋಕಿಸಿ, ವೈಫಲ್ಯಗಳ ನಿಟ್ಟಿನಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಹೇಳಿದರು.

Advertisement

ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಬೆಳಗಾವಿ ತಾಲೂಕಿನ ಸಾವಗಾಂವ ಗ್ರಾಮದ 2 ಎಕರೆ ಜಮೀನಿನಲ್ಲಿ ಅಮೆರಿಕ ಮಾದರಿಯ ಅಂತಾರಾಷ್ಟ್ರೀಯ ಕುಸ್ತಿ ಶಾಲೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.

2018ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 17 ಮಿಮೀ ಹಾಗೂ ಹಿಂಗಾರು ಹಂಗಾಮಿನಲ್ಲಿ 51 ಮಿಮೀ ಮಳೆ ಕೊರತೆ ಆಗಿದ್ದು ಮುಂಗಾರು ಹಂಗಾಮಿನಲ್ಲಿ ಅಥಣಿ, ಕಾಗವಾಡ, ರಾಮದುರ್ಗ, ಸವದತ್ತಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಎಲ್ಲ 14 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದರು.

ಸಮ್ಮಿಶ್ರ ಸರಕಾರದ ಘೋಷಣೆಯಂತೆ ಜಿಲ್ಲೆಯಲ್ಲಿ 3,94,000 ರೈತರ ಒಟ್ಟು 2418.00 ಕೋಟಿ ರೂ ಸಾಲಮನ್ನಾ ಮಾಡಲಾಗುತ್ತಿದ್ದು, ಈಗಾಗಲೇ 24,959 ರೈತರ 376.45 ಕೋಟಿ ರೂ. ಸಾಲದ ಮೊತ್ತವನ್ನು ಪಾವತಿಸಲಾಗಿದೆ. ಉಳಿದ ರೈತರ ಸಾಲದ ಮೊತ್ತ ಸಹ ಶೀಘ್ರದಲ್ಲೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಧ್ಯಮ ಹಾಗೂ ಭಾರೀ ನೀರಾವರಿ ಇಲಾಖೆಯಿಂದ ಕಳೆದ 5 ವರ್ಷಗಳಲ್ಲಿ ಜಿಲ್ಲೆಯ ಒಟ್ಟು 222 ಕೆರೆಗಳನ್ನು ತುಂಬಿಸಲು ಒಟ್ಟು 613 ಕೋಟಿ ಅಂದಾಜು ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಲ್ಲದೆ 2018-19ನೇ ಸಾಲಿನಲ್ಲಿ 632 ಕೋಟಿ ರೂ. ವೆಚ್ಚದಲ್ಲಿ ಸತ್ತಿಗೇರಿ ಏತ ನೀರಾವರಿ ಯೋಜನೆ ಹಾಗೂ 250 ಕೋಟಿ ರೂ. ವೆಚ್ಚದಲ್ಲಿ ಗಟ್ಟಿ ಬಸವಣ್ಣ ಏತ ನೀರಾವರಿ ಯೋಜನೆ ಕೈಗೊಳ್ಳಲಾಗಿದೆ. ಘಟಪ್ರಭಾ ಎಡದಂಡೆಯ ಒಟ್ಟು 69 ಕಿಮೀ ಕಾಲುವೆಯ ಅಧುನೀಕರಣ ಕಾಮಗಾರಿಗೆ 573 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಹೇಳಿದರು.

Advertisement

ಗಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆಯಿಂದ 4,28,688 ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡಿ ಬೆಳಗಾವಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 29.64 ಕೋಟಿ ವೆಚ್ಚ ಭರಿಸಲಾಗಿದ್ದು, 72 ಲಕ್ಷಗಳಷ್ಟು ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಳಗಾವಿ ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ 1000 ಕೋಟಿ ರೂ. ಹಂಚಿಕೆಯಾಗಿದ್ದು, ಇದರಲ್ಲಿ ಸ್ಮಾರ್ಟ್‌ ರಸ್ತೆಗಳಿಗೆ ರೂ.434 ಕೋಟಿ, ಭೂಗತ ಎಲ್‌.ಟಿ ವಿದ್ಯುತ್‌ ಕೇಬಲ್‌ ಹಾಗೂ ಅಲಂಕಾರಿಕ ವಿದ್ಯುತ್‌ ಕಂಬ ಅಳವಡಿಕೆಗೆ 154 ಕೋಟಿ, ಸೆಂಟ್ರಲ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ನಿರ್ಮಾಣಕ್ಕೆ .126 ಕೋಟಿ, ಕಲಾ ಮಂದಿರ ಜಾಗೆದಲ್ಲಿ ಅತ್ಯಾಧುನಿಕ ಮಾರಾಟ ಮಳಿಗೆಗೆ 43 ಕೋಟಿ ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಅಮೃತ ಯೋಜನೆಯಡಿ ಒಳಚರಂಡಿಗಾಗಿ ರೂ.176.00ಕೋಟಿ ನಿಗದಿಪಡಿಸಿದ್ದು, ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ನೀರು ಸರಬರಾಜು ಸಾಮರ್ಥ್ಯವನ್ನು 12.00 ಎಂ.ಜಿ.ಡಿಯಿಂದ 18 ಎಂ.ಜಿ.ಡಿಗೆ ಹೆಚ್ಚಿಸಲು 19.59 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಪೊಲೀಸ್‌ ಆಯುಕ್ತರ ಕಚೇರಿ ನಿರ್ಮಾಣಕ್ಕೆ 17 ಕೋಟಿ ರೂ. ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣಾ ಸೈನಿಕ ಶಾಲೆಯ ಕಟ್ಟಡ ನಿರ್ಮಾಣ ಹಾಗೂ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣಾ ಸ್ಮಾರಕ ಮ್ಯೂಸಿಯಂ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಚಿವರು ಹೇಳಿದರು.

ಸರ್ವೋತ್ತಮ ಪ್ರಶಸ್ತಿ: ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹಾನಗರ ಪಾಲಿಕೆ ಅಯುಕ್ತ ಶಶಿಧರ ಕುರೇರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಮ್‌ ನಸಲಾಪುರೆ, ಚಿಕ್ಕೋಡಿ ಕೃಷಿ ಅಧಿಕಾರಿ ಶೈಲಜಾ ಬೆಳ್ಳಂಕಿಮಠ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಬಿ.ಕುಲಕರ್ಣಿ, ಕೃಷಿ ಮಾರುಕಟ್ಟೆ ಉಪನಿರ್ದೇಶಕರ ಕಚೇರಿ ಮೇಲ್ವಿಚಾರಕ ನವೀನ ಪಾಟೀಲ ಹಾಗೂ ಡಿಸಿ ಕಚೇರಿ ಎಫ್‌ಡಿಸಿ ಬಿ.ಆರ್‌.ಹೊಂಗಲ್‌ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನ 27 ವಿವಿಧ ತುಕುಡಿಗಳ ಆಕರ್ಷಕ ಪಥ ಸಂಚಲನ ಗಮನ ಸೆಳೆದವು. ಅತ್ಯುತ್ತಮ ಪಥ ಸಂಚಲನ ನಡೆಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ನಡೆದ ಶಾಲಾ ಮಕ್ಕಳ ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ಜನರ ಗಮನ ಸೆಳೆದವು.

ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್‌ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿಪಂ ಸಿಇಒ ಕೆ.ವಿ. ರಾಜೇಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ ಕುಮಾರ ರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next