ಬೀದರ: ಬೀದರ ಸುತ್ತಲ ರೈತರು ತಮ್ಮ ಜಮೀನು ಬಿಡಿಎಗೆ ನೀಡಿದರೆ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿ ಅರ್ಧ ಬಡಾವಣೆಯನ್ನು ರೈತರಿಗೆ ನೀಡಿ ಇನ್ನರ್ಧ ಬಡಾವಣೆಯನ್ನು ಬಿಡಿಎ ಉಳಿಸಿಕೊಳ್ಳುವುದು ಎಂದು ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಇಷ್ಟ ಇರುವ ರೈತರು ತಮ್ಮ ಜಮೀನು ನೀಡಬಹುದು. ನೀಡಿದರೆ, ಅಭಿವೃದ್ಧಿಗೊಳಿಸಲಾಗುತ್ತದೆ. ತಾಲೂಕಿನ ಗೋರನಳ್ಳಿಯ ಸರ್ವೇ ನಂ. 21, 22ರಲ್ಲಿ 32 ಎಕರೆ ಜಮೀನಿನಲ್ಲಿ ಎರಡು ಬಡಾವಣೆ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಬಡವರಿಗೆ ಮನೆಗಳನ್ನು ಕಟ್ಟಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ಅಮೃತ ಯೋಜನೆಯಡಿ ಬೀದರ ನಗರದಲ್ಲಿ ಮೂರು ಹಂತದಲ್ಲಿ ಈಗಾಗಲೇ ಒಳ ಚರಂಡಿ (ಯುಜಿಡಿ) ಕಾಮಗಾರಿ ಮಾಡಲಾಗಿದೆ. ಇದೀಗ 17.34 ಕೋಟಿ ರೂ. ವೆಚ್ಚದಲ್ಲಿ ನಾಲ್ಕನೇ ಹಂತದ ಯುಜಿಡಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗುವುದು. ಮೊದಲ ಮೂರು ಹಂತದ ಯುಜಿಡಿ ಕಾಮಗಾರಿ ಪರಿಶೀಲಿಸಿದ್ದು, ಚೆನ್ನಾಗಿಯೇ ಆಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬೀದರ ಹೊರವಲಯದ ಗೊರನಳ್ಳಿಯ ಎರಡು ಎಸ್‌ಟಿಪಿ ಘಟಕ ಪೈಕಿ ಒಂದರಲ್ಲಿ ಸೋರಿಕೆಯುಂಟಾಗುತ್ತಿದೆ. ಅಮೃತ ಯೋಜನೆಯಡಿ ಘಟಕ ಚೆನ್ನಾಗಿ ಕೆಲಸ ಮಾಡುತ್ತಿದೆ. ಸೋರಿಕೆಯಾಗುತ್ತಿರುವ ಎಸ್‌ಟಿಪಿ ಘಟಕವನ್ನು ಮುಂದಿನ ಆರು ತಿಂಗಳ ಒಳಗಾಗಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ದುರಸ್ತಿಗೊಳಿಸಲಾಗುವುದು. ಗುತ್ತಿಗೆದಾರನೇ ತನ್ನ ಸ್ವಂತ ಖರ್ಚಿನಲ್ಲಿ ಸೋರಿಕೆಯಾಗುತ್ತಿರುವುದನ್ನು ದುರಸ್ತಿ ಮಾಡಬೇಕು ಎಂದು ಈಗಾಗಲೇ ಗುತ್ತಿಗೆದಾರನಿಗೆ ಸೂಚಿಸಲಾಗಿದೆ ಎಂದರು.
ಖರೇಜ್ ವರದಿ ಸಲ್ಲಿಸಿ: ನಗರದ ಐತಿಹಾಸಿಕ ಖರೇಜ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಿನ 15 ದಿನಗಳ ಒಳಗಾಗಿ ಜಿಲ್ಲಾಡಳಿತ ಕ್ರಮ ಕೈಗೊಂಡು ವರದಿ ನೀಡಬೇಕು. ಖರೇಜ್ ಅಭಿವೃದ್ಧಿಗಾಗಿ ಸರ್ಕಾರದ 8 ಕೋಟಿಯ ಪೈಕಿ ಬಿಡುಗಡೆಯಾದ 5 ಕೋಟಿ ಖರೇಜ್‌ಗಾಗಿಯೇ ಬಳಸಬೇಕು ಖರೇಜ್ ವ್ಯಾಪ್ತಿಯ ಬಫರ್‌ಝೋನ್‌ನಡಿ ಯಾವುದೇ ಹೊಸ ಮನೆಗಳ ನಿರ್ಮಾಣ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.