ಕುಣಿಗಲ್: ಯಾರನ್ನೂ ಬೇಡದೆ, ಓಲೈಸದೆ ಗ್ರಾಮದ ಪ್ರಗತಿಗೆ ಪಣತೊಟ್ಟು ಅಭಿವೃದ್ಧಿಪಡಿಸುತ್ತಿರುವ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರ ಕಾರ್ಯವೈಖರಿಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಅಮೃತೂರು ಹೋಬಳಿ ಕಾಡು ಶೆಟ್ಟಿಹಳ್ಳಿ ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್‌ನಾರಾಯಣ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ನನ್ನ ಸೌಭಾಗ್ಯ: ಮಾರ್ಕೋನಹಳ್ಳಿ ಜಲಾಶಯದ ಸಮೀಪ ಗ್ರಾಮದ ಪ್ರವೇಶದ ದಾರಿಯಲ್ಲಿ ಗ್ರಾಮದೇವತೆ ದೈತ್ಯಮಾರಮ್ಮ ಮಹಾದ್ವಾರ ನಿರ್ಮಾಣ, ಸರ್ಕಾರಿ ಶಾಲೆ ದತ್ತು ಪಡೆದಿರುವ ಗ್ರಾಮಸ್ಥರು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆದು ಶಿಕ್ಷಕಿ ನೇಮಕ ಮಾಡಿ ಈಗ ನೂತನ ಕಟ್ಟಡ ನಿರ್ಮಿ ಸಿರುವುದು ಹಾಗೂ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ತೊರಹಳ್ಳಿ ಸಂಪರ್ಕ ಕಲ್ಪಿಸಲು ಸೇತುವೆ ವ್ಯವಸ್ಥೆ ಮಾಡಿರುವ ಗ್ರಾಮಸ್ಥರ ಅಭಿವೃದ್ಧಿ ಸಹಭಾಗಿತ್ವ ಎಲ್ಲರಿಗೂ ಮಾದರಿ. ಸರ್ಕಾರ ಅನುದಾನ ಪಡೆದು ಶಂಕುಸ್ಥಾಪನೆ ಮಾಡುವುದು ಸಹಜ. ಆದರೆ ಗ್ರಾಮಸ್ಥರು ಅಭಿವೃದ್ಧಿ ಮಾಡಿ ನನ್ನಿಂದ ಉದ್ಘಾಟಿಸುತ್ತಿರುವುದು ಸೌಭಾಗ್ಯ ಎಂದು ತಿಳಿಸಿದರು.
ಅನ್ಯಾಯದ ವಿರುದ್ಧ ಹೋರಾಟ: ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿಗೆ ಮಂಜೂರಾಗಿದ್ದ ನೂರಾರು ಕೋಟಿ ರೂ. ಅನುದಾನ ಬಿಜೆಪಿ ಸರ್ಕಾರ ತಡೆ ಮಾಡಿರುವುದರ ಬಗ್ಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಗಮನಕ್ಕೆ ತರಲು ಮುಂದಾಗಿದ್ದೆ. ಆದರೆ ಡಿಸಿಎ ತುರ್ತು ಕಾರ್ಯದ ನಿಮಿತ್ತ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸದೆ ತೆರಳಿದ್ದಾರೆ. ಆದರೂ ತಾಲೂಕಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನನ್ನ ಹೋರಾಟ ಮುಂದು ವರಿಯಲಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಮಕ್ಕಳ ಆಶ್ರಯ ಇಲ್ಲದೇ ನಿರ್ಗತಿಕವಾಗಿ ವಾಸಿಸುತ್ತಿರುವ ವೃದ್ಧರ ಗುರುತಿಸಿ ಶಾಸಕರ ವೇತನದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದ ಅವರು, ಈಗಾಗಲೇ ಇಬ್ಬರು ವೃದ್ಧೆ ಯರಿಗೆ ಮನೆ ನಿರ್ಮಿಸಿ ಮಾಡಿಕೊಟ್ಟಿರುವುದಾಗಿ ಹೇಳಿದರು.
ಸರ್ಕಾರದ ಅನುದಾನ ಇಲ್ಲದೇ ಗ್ರಾಮವನ್ನು ಗ್ರಾವಸ್ಥರೆ ಅಭಿವೃದ್ಧಿ ಮಾಡಿಕೊಳ್ಳುತ್ತಿರುವುದು ರಾಜ್ಯಕ್ಕೆ ಕಾಡಶೇಟ್ಟಿಹಳ್ಳಿ ಗ್ರಾಮ ಮಾದರಿಯಾಗಿದೆ. ಇಂತಹ ಗ್ರಾಮ ನನ್ನ ಕ್ಷೇತ್ರದಲ್ಲಿ ಇರುವುದೇ ಹೆಮ್ಮೆ. ಇದೇ ರೀತಿ ತಾಲೂಕಿನಲ್ಲಿ ಎಲ್ಲಾ ಗ್ರಾಮಗಳು ಈ ರೀತಿಯ ಚಿಂತನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.