Advertisement

ಮಾನವೀಯ ಸಂಬಂಧ ಬೆಳೆಸಿ

12:55 PM Jan 16, 2017 | |

ಕಲಬುರಗಿ: ವೈದ್ಯರು ಮಾನವೀಯ ಸಂಬಂಧಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಹಿರಿಯ ಸಾಹಿತಿ ಡಾ| ಮ.ಗು. ಬಿರಾದಾರ ವೈದ್ಯರಿಗೆ ಸಲಹೆ ನೀಡಿದರು. ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಪರಿಷತ್ತಿನ 19 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ| ಎಸ್‌.ಎಸ್‌.ಪಾಟೀಲ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಮನುಷ್ಯರು ಬದುಕಲು ಯೋಗ ಹಾಗೂ ಭೋಗ ಎರಡೂ ಬೇಕು. ಭೋಗ ಕಡಿಮೆ ಮಾಡಿ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಆರೋಗ್ಯವಂತರಾಗಲು ಸಾಧ್ಯ ಎಂದರು. ಪ್ರತಿಯೊಬ್ಬರಿಗೂ ಆರೋಗ್ಯ ಅತ್ಯಂತ ಪ್ರಮುಖ. ಯಾರು ಆರೋಗ್ಯ ಕಳೆದುಕೊಳ್ಳುತ್ತಾರೋ ಅವರು ತಮ್ಮ ಸರ್ವಸ್ವವನ್ನು ಕಳೆದುಕೊಂಡಂತೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. 

ಆಧುನಿಕ ಯುಗದಲ್ಲಿ ಒತ್ತಡದ ಮಧ್ಯ ಕೆಲಸ ಮಾಡುವುದರಿಂದ ಅನೇಕ ಅನಾಮಧೇಯ ರೋಗಗಳು ಹರಡುತ್ತಿವೆ. ರೋಗ ಬಾರದಂತೆ ಮೊದಲೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಯಾರೇ ಆಗಲಿ ಸ್ವಾರ್ಥಿಯಾಗಿ ಬದುಕದೇ, ವಿಶಾಲ ಮನೋಭಾವ ಹೊಂದಿ, ತನ್ನೊಂದಿಗೆ ಇತರರು ಬದುಕಲಿ ಎನ್ನುವ ನಿಲುವನ್ನು ಹೊಂದುವ ಜೊತೆಗೆ ತನ್ನ ಉದ್ಧಾರದ ಜೊತೆಗೆ ಇತರರ ಉದ್ಧಾರಕ್ಕೂ ಯತ್ನಿಸುವ ವಿಶಾಲ ಮನೋಭಾವ ಹೊಂದಬೇಕು ಎಂದರು. 

ಸಮಾಜದ ಸ್ವಾಸ್ಥಕ್ಕೆ ಕಾರಣರಾದ ಮೂವರು ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ತಜ್ಞ ಡಾ| ಗಿರೀಶ ಪಾಟೀಲ, ಮನುಷ್ಯನಿಗೆ ಸಂಸಾರ ಮುಖ್ಯ. ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದ ಕೆಲಸಕ್ಕೆ ಉತ್ತಮ ಪ್ರತಿಫಲ ಸಿಗುತ್ತದೆ. ಮನುಷ್ಯ ಇಂದು ಸಜೀವ ವಸ್ತುಗಳಿಗಿಂತ ನಿರ್ಜೀವ ವಸ್ತುಗಳಾದ ಮೊಬೈಲ್‌, ಗಣಕಯಂತ್ರ, ದೂರದರ್ಶನದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾನೆ. 

ಇದರಿಂದ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ತಲೆದೋರುತ್ತಿವೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ಜೀವನ ಶೈಲಿ ಹಾಗೂ ಯೋಗ ಒಂದೇ ಮಾರ್ಗ ಎಂದರು. ಪರಿಷತ್‌ ಅಧ್ಯಕ್ಷ ಡಾ| ಎಸ್‌.ಎಸ್‌.ಗುಬ್ಬಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಸಾಹಿತಿ ಡಾ| ನಾ.ಸೋಮೇಶ್ವರ, ಜನಾರೋಗ್ಯ ಆಡಳಿತ ತಜ್ಞ ಡಾ| ಶಿವರಾಜ ಸಜ್ಜನಶೆಟ್ಟಿ, ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ತಜ್ಞ ಡಾ| ಗಿರೀಶ ಪಾಟೀಲ ಅವರಿಗೆ 2016 ನೇ ಸಾಲಿನ ಡಾ| ಎಸ್‌.ಎಸ್‌. ಪಾಟೀಲ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ| ಶಿವರಾಜ ಅಲಶೆಟ್ಟಿ, ಎಸ್‌.ಎಸ್‌.ಹಿರೇಮಠ ಹಾಗೂ ಇತರರಿದ್ದರು. ಮಡಿವಾಳಪ್ಪ ನಾಗರಳ್ಳಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next