Advertisement

ಸಿಟಿ ಸ್ಮಾರ್ಟ್‌ ಜೊತೆಗೆ ಕೆರೆ ಅಭಿವೃದ್ಧಿಪಡಿಸಿ

12:48 PM Apr 22, 2017 | Team Udayavani |

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆಯನ್ನು ಸ್ಮಾರ್ಟ್‌ ಸಿಟಿಯನ್ನಾಗಿಸುವ ಜೊತೆಗೆ ಸುತ್ತಮುತ್ತಲಿನ 10 ಕೆರೆಗಳ ಸಂಪೂರ್ಣ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ನಿವೃತ್ತ ಇಂಜಿನಿಯರ್‌ ಬಸವರಾಜ ಕುಂಚೂರು ಅಭಿಪ್ರಾಯಪಟ್ಟಿದ್ದಾರೆ. 

Advertisement

ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಿಂದ ದಾವಿವಿ ಸಹಭಾಗಿತ್ವದಲ್ಲಿ ಮಧ್ಯಕಾಲೀನ ಕರ್ನಾಟಕದ ಜಲವಾಸ್ತುಶಿಲ್ಪ ಕುರಿತ 2 ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ನುಡಿಗಳನ್ನಾಡಿದರು.

ಇಂದು ನಗರದ ಬೀದಿಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದು ನಿಜಕ್ಕೂ ದುರಂತ. ನಮ್ಮ ನಗರಿ ರಾಜ್ಯದ ಮಧ್ಯ ಬಿಂದು. ಕೆರೆ ಕಟ್ಟೆಗಳಿಗೆ ಕೊರತೆ ಇಲ್ಲದ ಜಿಲ್ಲೆಯ ಕೇಂದ್ರ. ಅಂತಹ ನಗರಿಯ ನಾಗರಿಕರು ನೀರಿಗೆ ಪರದಾಡಬೇಕಾದ ಸ್ಥಿತಿ ಬಂದಿರುವುದು ವಿಷಾದನೀಯ ಎಂದರು.

ಇದೀಗ ನಗರವನ್ನು ಸ್ಮಾರ್ಟ್‌ ಸಿಟಿಯನ್ನಾಗಿಸುವ ಕೆಲಸ ನಡೆಯಲಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಆದರೆ, ಇಂತಹ ಸಿಟಿಯಲ್ಲಿ ವಾಸಿಸುವ ಜನರಿಗೆ ಶುದ್ಧ ಗಾಳಿ, ಆಹಾರ, ನೀರು ಪೂರೈಸದಿದ್ದರೆ ಅದು ಸ್ಮಾರ್ಟ್‌ ಸಿಟಿ ಆಗುವುದಿಲ್ಲ. ಇದನ್ನೂ ಸಹ ಜಿಲ್ಲಾಡಳಿತ, ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು.

ಹಾಲಿ ಕುಂದುವಾಡ ಕೆರೆ ಪುನರುಜೀವನಗೊಳಿಸಿದ ಸಚಿವ ಮಲ್ಲಿಕಾರ್ಜುನ್‌ ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ನೀರು ಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಿದೆ ಎಂದು ಅವರು ಹೇಳಿದರು. 

Advertisement

ನಗರದ 10 ಮೈಲಿ ದೂರದಲ್ಲಿ ಸಾಕಷ್ಟು ಕೆರೆಗಳಿವೆ. ಅಣಜಿ ಕೆರೆ, ಬಾತಿಕೆರೆ ಸೇರಿದಂತೆ ಅನೇಕ ಕೆರೆಗಳಿವೆ. ಇವುಗಳನ್ನು ಅಭಿವೃದ್ಧಿಪಡಿಸಬೇಕು. ಅಂತರ್ಜಲ ಹೆಚ್ಚಿಸುವ ಜೊತೆಗೆ ಮುಂದಿನ ದಿನಗಳಲ್ಲಿ ನಗರದ ಜನತೆಗೆ ಸಮರ್ಪಕ ನೀರು ಕೊಡುವ ಕುರಿತು ಚಿಂತಿಸಬೇಕು ಎಂದು ಅವರು ಹೇಳಿದರು. 

ಗ್ರಾಮೀಣ ಪ್ರದೇಶದಲ್ಲಿ ಕೆರೆ, ಕಟ್ಟೆ, ಬಾವಿಗಳನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಕಳೆದ ಮೂರು ವರ್ಷದಲ್ಲಿ ಸಮರ್ಪಕ ಮಳೆ ಬೀಳದೆ ಇದ್ದುದರಿಂದ ಜಲಕ್ಷಾಮ ಉಂಟಾಗಿದೆ. ಇದೀಗ ಗ್ರಾಮೀಣ ಜನರು ಈ ಕೆರೆ, ಕಟ್ಟೆಗಳತ್ತ ಗಮನ ಕೇಂದೀಕರಿಸುತ್ತಿದ್ದಾರೆ. ಕೊಳವೆಬಾವಿ ಕೊರೆಯಿಸಲು ಪ್ರಾರಂಭಿಸಿದ ನಂತರ ಬಾವಿ, ಕೆರೆ ಮರೆತಿದ್ದೇ ಇಂದಿನ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.  

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಕುಸುಮ ಮಾತನಾಡಿ, ಇಂದು ನಾವು ಪ್ರಕೃತಿ ಮೇಲೆ ಮಾಡುತ್ತಿರುವ ದೌರ್ಜನ್ಯದಿಂದಾಗಿ ಅನೇಕ ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿವೆ. ನೀರಿನ ಸಮಸ್ಯೆಯಂತೂ ಭೀಕರ ಮಟ್ಟ ಮುಟ್ಟಿದೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು. 

ಕಾಲೇಜು ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಟಿ. ವೀರೇಶ್‌, ಪ್ರೊ| ತಿಪ್ಪಾರೆಡ್ಡಿ ವೇದಿಕೆಯಲ್ಲಿದ್ದರು. ಇದಕ್ಕೂ ಮುನ್ನ ನಡೆದ ಗೋಷ್ಠಿಗಳಲ್ಲಿ ಅಂತರ್ಜಲ ತಜ್ಞ ಎನ್‌.ಜೆ. ದೇವರಾಜ ರೆಡ್ಡಿ, ಡಾ| ಆರ್‌.ಎಚ್‌. ಕುಲಕರ್ಣಿ, ಡಾ| ಸಿದ್ಧಲಿಂಗಯ್ಯ ಇತರರು ವಿಚಾರ ಮಂಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next