ಗಜೇಂದ್ರಗಡ: ಉದ್ಯಾನವನ ಇದೆ ಆದರೆ ವಾಯುವಿಹಾರಕ್ಕೆ ಸರಿಯಾದ ಫುಟ್ಪಾತ್ ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ, ಸಮರ್ಪಕ ನಿರ್ವಹಣೆ ಇಲ್ಲ, ಹಸಿರು ಹುಲ್ಲಿನ ಹಾಸಿಗೆಯಂತೂ ಇಲ್ಲವೇ ಇಲ್ಲ.
ಒಂದು ಸಮಯದಲ್ಲಿ ಆಕರ್ಷಣೀಯವಾಗಿದ್ದ ಉದ್ಯಾನವನ ಇದೀಗ ಅಂದ ಕಳೆದುಕೊಂಡು ಕಾಲಗರ್ಭಕ್ಕೆ ಸೇರುವ ಹಂತ ತಲುಪಿದ್ದು, ಅಧಿಕಾರಿಗಳು ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಜನತೆಯ ಬಹುದಿನದ ಬೇಡಿಕೆ ಮಕ್ಕಳ ಉದ್ಯಾನವನ ನಿರ್ಮಿಸುವ ಮೂಲಕ ಪುರಸಭಾ ಆಡಳಿತ ಜನರ ಕನಸು ಸಾಕಾರಗೊಳಿಸಿದೆ. ಆದರೆ ಉದ್ಯಾನವನ ನಿರ್ವಹಣೆ ಮಾತ್ರ ಕೈ ಚೆಲ್ಲಿ ಕುಳಿತಿದೆ. ಗಾರ್ಡನ್ ನಿರ್ವಹಣೆಗಾಗಿ ಪುರಸಭೆ ವತಿಯಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದೆ. ಆದಾಗ್ಯೂ ಸ್ವಚ್ಛತೆ ಮರೀಚಿಕೆಯಾಗಿದೆ.
ಸ್ವಚ್ಛತೆಗಿಲ್ಲ ಆದ್ಯತೆ: ಗುಡ್ಡದ ತಳಭಾಗದ ಕೆರೆ ಬಳಿಯ ಮಕ್ಕಳ ಉದ್ಯಾನವನ ಅನೈರ್ಮಲ್ಯದ ತಾಣವಾಗಿದೆ. ಎಲ್ಲೆಂದರಲ್ಲಿ ಸಂಗ್ರಹಿಸಿದ ತ್ಯಾಜ್ಯ, ಗಿಡಗಳು ಅಡ್ಡಾ ದಿಡ್ಡಿ ಬೆಳೆದು ನಿಂತ ಪರಿಣಾಮ ಫುಟ್ಪಾತ್ ಪಕ್ಕದಲ್ಲಿ ಸಂಚರಿಸುವ ಸಾರ್ವಜನಿಕರ ಮುಖಕ್ಕೆ ಬಡಿಯುವಂತಾಗಿದೆ. ಉದ್ಯಾನವನದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ನೀರು ಸಂಗ್ರಹಾಗಾರವಿದ್ದರೂ ನಿರುಪಯುಕ್ತವಾಗಿದೆ.
ಇನ್ನೊಂದೆಡೆ ಹಸಿರು ಹುಲ್ಲಿನ ಹಾಸಿಗೆಯಾಗುವ ಬದಲು ಸಂಪೂರ್ಣ ಒಣಗಿದ ಭೂಮಿಯಾಗಿದೆ. ಕೆಲ ಭಾಗದಲ್ಲಿ ಪುಟ್ಪಾತ್ ನಿರ್ಮಾಣಕ್ಕೆಂದು ಇರಿಸಿದ ಕಲ್ಲುಗಳು ಅದೇ ಸ್ಥಳದಲ್ಲಿವೆ. ಮಕ್ಕಳ ಆಟೋಟಕ್ಕೆ ನಿರ್ಮಿಸಿರುವ ಉಪಕರಣಗಳನ್ನು ಪುರುಷ, ಮಹಿಳೆಯರು ಉಪಯೋಗಿಸುತ್ತಿರುವುದು ಉದ್ಯಾನವನ ನಿರ್ವಹಣೆ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಣ್ಮರೆಯಾದ ಹಲವು ಪ್ರಭೇದ ಸಸ್ಯವರ್ಗ: ಉದ್ಯಾನವನದಲ್ಲಿ ಹಲವಾರು ಸಸ್ಯವರ್ಗ ವಿವಿಧ ಅಲಂಕಾರಗಳಿಂದ ನಿರ್ಮಿಸಲಾಗಿದೆ. ವರ್ಷ ಕಳೆದಂತೆ ಅವುಗಳೆಲ್ಲವೂ ಮಾಯವಾಗುವ ಹಂತಕ್ಕೆ ತಲುಪಿದೆ. ಸಮಯಕ್ಕೆ ಸರಿಯಾಗಿ ನೀರು ಹಾಕಿ ಬೆಳೆಸದ ಹಿನ್ನೆಲೆಯಲ್ಲಿ ಸಸ್ಯಗಳು ಒಣಗಿವೆ.
ಶಾಸಕರೇ ಇತ್ತ ಕಣ್ಣು ಹಾಯಿಸಿ: 2012ರಲ್ಲಿ 4.40 ಲಕ್ಷ ರೂ. ವೆಚ್ಚದಲ್ಲಿ 851 ಚದರ ಜಾಗೆಯಲ್ಲಿ ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ, ಪ್ರಸ್ತುತ ಶಾಸಕರಾದ ಕಳಕಪ್ಪ ಬಂಡಿ ಅವರ ಅಧಿಕಾರವಧಿಯಲ್ಲಿ ಸುಂದರವಾಗಿ ಅವತಾರವೆತ್ತಿದ್ದ ಉದ್ಯಾನವನ ಇಂದು ಹಾಳು ಕೊಂಪೆಯಂತಾಗಿ ನಿಂತಿದೆ. ಅಂದು ನಿರ್ಮಿಸಿದ ಉದ್ಯಾನವನ ಇದೀಗ ಪಟ್ಟಣದ ಜನತೆಯ ನೆಚ್ಚಿನ ಸ್ಥಳವಾಗಿದೆ. ಹೀಗಾಗಿ ಶಾಸಕರು ಇತ್ತ ಗಮನ ಹರಿಸಿ ಉದ್ಯಾನವನ ಪುನಶ್ಚೇತನಕ್ಕೆ ಕಾಳಜಿ ವಹಿಸಬೇಕಿದೆ.
•ಡಿ.ಜಿ ಮೋಮಿನ್