ಚಿಕ್ಕಮಗಳೂರು: ನರ್ಸಿಂಗ್ ವೃತ್ತಿಗೆ ಸೇರ ಬಯಸುವವರು ಸೇವಾ ಮನೋಭಾವ ಹೊಂದಿರಬೇಕು ಎಂದು ಚರ್ಮರೋಗ ತಜ್ಞೆ ಡಾ| ಜಿಲಿಯಾನ ಹೇಳಿದರು.
ನಗರದ ಅಶ್ರಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದ ಸೇವಾವೃತ್ತಿ,ವೈದ್ಯಕೀಯ ಕ್ಷೇತ್ರಕ್ಕೆ ಅದೇ ನಿಜವಾದ ತಳಹದಿ. ಅಲ್ಲಿ ನರ್ಸ್‌ಗಳು ಶ್ರದ್ಧೆಯಿಂದ ರೋಗಿಗಳ ಆರೈಕೆ ಮಾಡಿದರೆ ಮಾತ್ರ ವೈದ್ಯರು ಯಶಸ್ವಿಯಾಗುತ್ತಾರೆ ಎಂದರು.
ರೋಗಿಗಳು ಗುಣಮುಖರಾಗುವಲ್ಲಿ ವೈದ್ಯರಿಗಿಂತ ನರ್ಸ್‌ಗಳ ಪಾತ್ರ ಅತ್ಯಂತ ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ನರ್ಸಿಂಗ್ ವೃತ್ತಿ ಮಾಡುವವರು ಶ್ರದ್ಧೆ, ಕರುಣೆ, ಅನುಕಂಪ, ಪ್ರೀತಿ, ವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೆನರಾ ಬ್ಯಾಂಕ್ ಬಸವನಹಳ್ಳಿ ಶಾಖೆಯ ಹಿರಿಯ ವ್ಯವಸ್ಥಾಪಕಿ ಮಮತಾ ಮಾತನಾಡಿ, ನರ್ಸಿಂಗ್ ಕೆಲಸ ದೇವರ ಪೂಜೆ ಇದ್ದಹಾಗೆ. ಅದನ್ನು ಶ್ರದ್ದೆ ಮತ್ತು ಭಕ್ತಿಯಿಂದ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಡಾ|ಡಿ.ಎಲ್.ವಿಜಯ್ ಕುಮಾರ್, ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಸಂಸ್ಥೆಯಲ್ಲಿ ನುರಿತ ಭೋದನಾ ಸಿಬ್ಬಂದಿ ಸೇರಿದಂತೆ ಎಲ್ಲಾ ರೀತಿಯ ಮೂಲಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ನಿರ್ದೇಶಕಿ ಡಾ|ಶುಭಾ ವಿಜಯ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಪ್ರಾಂಶುಪಾಲೆ ಶೃತಿ ವಾರ್ಷಿಕ ವರದಿ ಮಂಡಿಸಿದರು. ಇದೇ ವೇಳೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ಕೃತ್ಯದಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.