Advertisement

ರಸ್ತೆ ಅಭಿವೃದ್ಧಿ ಮಾಡಿ, ಮತ ಹಾಕ್ತೀವಿ!

10:04 AM Apr 02, 2019 | pallavi |
ಕಲ್ಲುಗುಡ್ಡೆ : ನೂಜಿಬಾಳ್ತಿಲ ಗ್ರಾಮದ 2ನೇ ವಾರ್ಡ್‌ಗೆ ಸಂಬಂಧಪಟ್ಟ ಬದಿಬಾಗಿಲು, ಒರುಂಬಾಲು, ಲಾವತ್ತಡ್ಕ ಸಂಪರ್ಕಿಸುವ ರಸ್ತೆಗೆ ಡಾಮರು ಆಗಿಲ್ಲವೆಂದು ಆರೋಪಿಸಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಗ್ರಾಮಸ್ಥರು ರವಿವಾರ ನೂಜಿಬಾಳ್ತಿಲದ ಒರುಂಬಾಳಿನಲ್ಲಿ ಸೇರಿ ಪೂರ್ವಭಾವಿ ಸಭೆ ನಡೆಸಿದರು. ರಸ್ತೆ ಅಭಿವೃದ್ಧಿಯಾದ ಬಳಿಕವೇ ಮತದಾನ ಮಾಡುವುದಾಗಿ ಗ್ರಾಮಸ್ಥರು ಒಟ್ಟಾಗಿ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದರು.
ಶ್ರೀಧರ ಕಂಪ ಮಾತನಾಡಿ, ಬದಿಬಾಗಿಲಿನಿಂದ ಲಾವತ್ತಡ್ಕ ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಗೆ 25 ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಿದ್ದು, ಅವರಿಂದ ಚುನಾವಣೆ ಸಂದರ್ಭ ಭರವಸೆ ದೊರೆತಿದೆಯೇ ವಿನಾ ರಸ್ತೆ ಡಾಮರು ಕಂಡಿಲ್ಲ. 2018ರ ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದರೂ ಯಾವುದೇ ಬೆಳವಣಿಗೆ ನಡೆಯದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸುವುದರೊಂದಿಗೆ ಇದನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಿದ ಬಳಿಕವೇ ಮತದಾನ ಮಾಡುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಂಡು ರಸ್ತೆ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿದ್ದಾರೆ.
ಹಕ್ಕು ಚಲಾಯಿಸಿ
ನೀತಿ ತಂಡದ ರಾಜ್ಯ ಟ್ರಸ್ಟಿ ಸುಜಿತ್‌ ಸಿ.ಪಿ. ಇಚ್ಲಂಪಾಡಿ ಮಾತನಾಡಿ, ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಅದು ನಮ್ಮ ಕರ್ತವ್ಯವೂ ಆಗಿದೆ. ನಮಗೆ ಸೂಕ್ತವಲ್ಲದ ಅಭ್ಯರ್ಥಿಗಳು ಇಲ್ಲವೆಂದ ಸಂದರ್ಭದಲ್ಲಿ ನೋಟಾ ಮತದಾನಕ್ಕೆ ಅವಕಾಶವಿದ್ದು, ಮತದಾನ ಬಹಿಷ್ಕಾರ ಸೂಕ್ತವಲ್ಲವೆಂದು ಸಲಹೆ ನೀಡಿದ ಅವರು ಈ ಭಾಗದ ರಸ್ತೆ ಅಭಿವೃದ್ಧಿ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ನೀತಿ ತಂಡದ ವತಿಯಿಂದ ಬೆಂಬಲ ಸೂಚಿಸಿ, ರಸ್ತೆ ಅಭಿವೃದ್ಧಿಯಾಗುವಲ್ಲಿ ನಿಮ್ಮೊಂದಿಗೆ ಸದಾ ಇರುವುದಾಗಿ ಹೇಳಿದರು.
ಹೆಣ ಕೊಂಡೊಯ್ಯಲೂ ಆಗದು!
ಸುದೀಶ್‌ ಮಂಜೋಳಿ ಮಾತನಾಡಿ, ರಸ್ತೆ ಅವ್ಯವಸ್ಥೆಯಿಂದ ಬಹಳಷ್ಟು ತೊಂದರೆಯಾಗಿದೆ. ಯಾರಾದರೂ ಮೃತಪಟ್ಟರೆ ಮಳೆಗಾಲದಲ್ಲಿ ಹೆಣವನ್ನು ಬದಿಬಾಗಿಲು ಎನ್ನುವಲ್ಲಿ ಜನರ ದರ್ಶನಕ್ಕೆ ಇಡಬೇಕಾದ ಪರಿಸ್ಥಿತಿ ಒದೆ. ಬಳಿಕ ಎತ್ತಿಕೊಂಡು ಹೋಗಬೇಕಾಗಿರುವುದು ಇಲ್ಲಿನವರ ದೌರ್ಭಾಗ್ಯ. ಮಳೆಗಾಲದಲ್ಲಿ ಈ ರಸ್ತೆಯ ಅವಸ್ಥೆ ಹೇಳತೀರದು ಎಂದು ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಸರಿಪಡಿಸಿದ ಬಳಿಕವೇ ಮತದಾನ ಮಾಡುವುದೆಂದರು.
ಐವರು ಅಧ್ಯಕ್ಷರಾದರೂ ಸಾಧ್ಯವಾಗಿಲ್ಲ
ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ವಸಂತ ಪೂಜಾರಿ ಮಾತನಾಡಿ, 2ನೇ ವಾರ್ಡ್‌ ನನ್ನನ್ನು, ಸದಾ ನಂದ ಗೌಡ ಅವರನ್ನು ಸೇರಿ ಐವರು ಅಧ್ಯಕ್ಷರನ್ನು ನೀಡಿದ್ದು, ಆದರೂ ಈ ರಸ್ತೆ ಅಭಿವೃದ್ಧಿಗೊಳಿಸುವಲ್ಲಿ ಅಸಾಧ್ಯವಾಗಿರುವುದು ದುರಂತ ಎಂದರು. ಆನಂದ ಮಿತ್ತಂಡೇಲು, ಪೂವಪ್ಪ ಮಿತ್ತಂಡೇಲು, ವಿನೋದ ಮಿತ್ತಂಡೇಲು, ಪುರುಷೋತ್ತಮ ಮಿತ್ತಂಡೇಲು, ಹರೀಶ್‌ ಮಂಜೋಳಿ, ರಂದಿಪ್‌ ಮಂಜೋಳಿ, ಅನೂಪ್‌ ಮಂಜೋಳಿ, ಪುರುಷೋತ್ತಮ ಕಂಪ, ಅನಿಸ್‌ ಕಂಪ, ಆಲಿಸ್‌ ಚಾಕೋ ಕಂಪ, ಗೀತಾ ಪಲಯಮಜಲು, ಭವ್ಯಾ ಮಿತ್ತಂಡೇಲು, ಅಂಕಿತಾ ಕಂಪ, ಸುಬಾಸ್‌ ಪಲಯಮಜಲು, ಯೋಗೀಶ್‌ ಮಿತ್ತಂಡೇಲು, ಉಮೇಶ್‌ ಗೌಡ ಮಿತ್ತಂಡೇಲು,  ಬಿನೀಶ್‌ ಮಂಜೋಳಿ, ವಿದ್ಯಾಧರ ಮಂಜೋಳಿ, ರದೀಶ್‌ ಪಲಯಮಜಲು, ಪುರಂದರ ಮಿತ್ತಂಡೇಲು, ಅಶೋಕ ಮಿತ್ತಂಡೇಲು ಪಾಲ್ಗೊಂಡಿದ್ದರು.
ಭೇಟಿ ನೀಡದ ಅಧಿಕಾರಿಗಳು
ಕಳೆದ 2018ರ ವಿಧಾನಸಭಾ ಚುನಾವಣೆ ಸಂದರ್ಭ ರಸ್ತೆ ಅಭಿವೃದ್ಧಿಯಾಗಿಲ್ಲವೆಂದು ಇಲ್ಲಿಯ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅತೀ ಕಡಿಮೆ ಮತದಾನ ನೂಜಿಬಾಳ್ತಿಲ ಗ್ರಾಮದ ಈ ವಾರ್ಡ್‌ನಲ್ಲಿ ಆಗಿದ್ದು, ಯಾವ ಕಾರಣಕ್ಕೆ ಕಡಿಮೆ ಮತದಾನವಾಗಿದೆ ಎನ್ನುವ ಬಗ್ಗೆ ಗ್ರಾಮಸ್ಥರಲ್ಲಿ ವಿಚಾರಿಸಲೂ ಯಾವೊಬ್ಬ ಅಧಿಕಾರಿ ಅಥವಾ ಸಂಬಂಧಪಟ್ಟವರು ಇತ್ತ ಕಡೆ ಸುಳಿದಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next