Advertisement

ಸಮನ್ವಯ ಸಾಧಿಸಿ ಕಾರ್ಯಕ್ರಮ ರೂಪಿಸಿ

03:00 PM Sep 02, 2019 | Suhan S |

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಕುರಿತು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ 2019-20ನೇ ಸಾಲಿನ ಜಿಲ್ಲಾಮಟ್ಟದ ವಿಶೇಷ ಕಾರ್ಯಪಡೆ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಎಂಬ ಮಹತ್ವದ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆ ಆಯ್ಕೆಯಾಗಿದ್ದು ಮಹತ್ವದ ಈ ಯೋಜನೆ ಕುರಿತು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿದೆ. ಶಾಲೆಯಿಂದ ಹೊರಗುಳಿದ ಹೆಣ್ಣು ಮಗು ಹಾಗೂ ಅವರ ಕೌಟುಂಬಿಕ ಸ್ಥಿತಿಗಗಳ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಿ, ವಿವಿಧ ಯೋಜನೆಗಳಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಕೆಲಸ ಮಾಡಬೇಕಿದೆ ಎಂದರು.

ಜಿಪಂ ಸಿಇಒ ವಿಕಾಸ ಸುರಳಕರ ಮಾತನಾಡಿ, ಜಿಲ್ಲೆಯಲ್ಲಿ 4.75 ಲಕ್ಷ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದು, ಇದರಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣು ಮಗುವಿನ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. 1-10ನೇ ತರಗತಿವರೆಗೆ ಮಗು ಶಾಲೆಯಲ್ಲಿ ಓದುತ್ತಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ-ನ್ಯಾಯಾಧೀಶ ರವೀಂದ್ರ ಕಾರಭಾರಿ ಮಾತನಾಡಿ, ಜೆಜೆ ಆ್ಯಕ್ಟ್ ಪೋಕ್ಸೊ ಕಾಯ್ದೆ ಕುರಿತು ಸೂಕ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೊಂದಿಗೆ ಸಮನ್ವಯತೆ ಸಾಧಿಸಿ ಜಾಗೃತಿ ಕಾರ್ಯಕ್ರಮ ರೂಪಿಸಬೇಕು ಎಂದು ಸೂಚಿಸಿದರು.

Advertisement

ಜಿಲ್ಲಾ, ತಾಲೂಕು, ಗ್ರಾಮ, ವಾರ್ಡ್‌ ಮಟ್ಟದಲ್ಲಿ ವಿಶೇಷ ಕಾರ್ಯಪಡೆ ಸಮಿತಿ ಸಭೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಪಂಮಟ್ಟದ ಚುನಾಯಿತ ಪ್ರತಿನಿಧಿಗಳಿಗೆ, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಹಮ್ಮಿಕೊಳ್ಳುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸಿ.ಬಿ. ಕುಂಬಾರ ಮಾಹಿತಿ ನೀಡಿದರು.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ ಮತ್ತಿತರ ಸೌಲಭ್ಯ ಕಲ್ಪಿಸುವ ಜೊತೆಗೆ ಸಂತ್ರಸ್ತರಿಂದ ಸಲ್ಲಿಕೆಯಾದ ಅರ್ಜಿಗೆ ತಕ್ಷಣ ಸ್ಪಂದಿಸಿ 24 ಗಂಟೆಯಲ್ಲಿ 25 ಸಾವಿರ ರೂ. ಪರಿಹಾರ ಧನ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದರು.

ದೌರ್ಜನ್ಯಕ್ಕೊಳಗಾದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಚಾರ್ಜ್‌ಶಿಟ್ ಮಾಹಿತಿ, ತನಿಖಾ ಹಂತದ ಮಾಹಿತಿಯನ್ನು ವಾರದಲ್ಲಿ ಸಲ್ಲಿಸಬೇಕು. 18 ವರ್ಷ ಮೇಲ್ಪಟ್ಟ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಮುಂದಿನ ಸಭೆಯಲ್ಲಿ ವಿವರಿಸಬೇಕು. ವಿಲೇವಾರಿಯಾಗದ ವಿವಿಧ ಹಂತದಲ್ಲಿರುವ ಪ್ರಕರಣಗಳ ಕುರಿತು ಮಾಹಿತಿ ನೀಡುವಂತೆ ಪೊಲೀಸ್‌ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನೈಸರ್ಗಿಕ ನ್ಯಾಯಕ್ಕಾಗಿ ಬಾಲ್ಯ ವಿವಾಹ ತಡೆಯುವ ಕಾರ್ಯ ನಿರ್ವಹಣೆ ಕುರಿತು ಜಿಲ್ಲಾ ಸಮನ್ವಯ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬಾಲ್ಯ ವಿವಾಹ ಕಂಡುಬಂದಲ್ಲಿ ಸಮಿತಿಗೆ ದೂರು ನೀಡಿದರೆ, ತಪ್ಪಿತಸ್ಥರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಪಂ ಸಿಇಒ ವಿಕಾಸ ಸುರಳಕರ ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ-ದಮನಿತ ಮಹಿಳೆಯರ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ನಿವೇಶನ ಮಂಜೂರಾತಿ ಕುರಿತು ನಿವೇಶನ ಸಹಿತ, ನಿವೇಶನ ರಹಿತರ ಕುರಿತು ಮಾಹಿತಿ ಸಂಗ್ರಹಿಸಬೇಕು. ಪ್ರತಿ ತಾಪಂ ಇಒಗಳ ವ್ಯಾಪ್ತಿಯಲ್ಲಿ ನಿವೇಶನ ಲಭ್ಯತೆ ಅಧರಿಸಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ| ಔದ್ರಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಶರಣಪ್ಪ ಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ಬಿ. ಕುಂಬಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋದ್ದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಿರ್ಮಲಾ ಸುರಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.