ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವಂತೆ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಮೂಲ ಸೌಕರ್ಯಗಳ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅನುದಾನವನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಾಕೃತಿಕ ಮತ್ತು ಧಾರ್ಮಿಕ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಮತ್ತು ಸ್ವಚ್ಚತಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆಯವರು 15 ದಿನದೊಳಗೆ ಡಿ.ಪಿ.ಆರ್ ಮಾಡಿ ಸಲ್ಲಿಸಬೇಕು. ಸುಂದರ ಪರಿಸರ ನಿರ್ಮಾಣದಿಂದ ಪ್ರವಾಸಿಗರು ಬರಲು ಆಸಕ್ತಿ ವಹಿಸುತ್ತಾರೆ. ಇದರಿಂದ ಆದಾಯವೂ ಸಂಗ್ರಹಗೊಳ್ಳುತ್ತದೆ ಜಿಲ್ಲೆಯ ಬಸವನಹಳ್ಳಿ ಕೆರೆ, ಹೊನ್ನಮ್ಮನಹಳ್ಳ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ, ಸಿರಿಮನೆ ಫಾಲ್ಸ್, ಕಲ್ಲತ್ತಿಗಿರಿಗಳಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಡುವ ಜತೆಗೆ ತೂಗು ಸೇತುವೆ ನಿರ್ಮಾಣ, ಕಾಂಕ್ರೀಟ್ ವಾಲ್, ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.
ಮಾಣಿಕ್ಯಧಾರಕ್ಕೆ ಹರಿಯುತ್ತಿರುವ ನೀರು ಸಾರ್ವಜನಿಕರಿಂದ ಅಶುದ್ಧ ಗೊಳ್ಳುತ್ತಿದ್ದು, ಪ್ರಾಣಿಗಳಿಗೆ ನೀರು ಕುಡಿಯಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು. ಅಲ್ಲಿಗೆ ತೆರಳುವ ಪ್ರವಾಸಿಗರು ಮೂಢನಂಬಿಕೆಯಿಂದ ತಮ್ಮ ಬಟ್ಟೆಯನ್ನು ನೀರಿನಲ್ಲಿ ಹಾಕುತ್ತಿದ್ದಾರೆ. ಅದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಪ್ರತಿನಿತ್ಯ ಸ್ವಚ್ಛತಾ ಕಾರ್ಯ ಮಾಡಬೇಕು ಎಂದು ಹೇಳಿದರು.
ಕೈಮರ ಚೆಕ್‌ಪೋಸ್ಟ್‌ಗಳಲ್ಲಿ ಸುಂಕ ವಸೂಲಿ ಮಾಡುತ್ತಿದ್ದು, ಅದನ್ನು ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಬಳಸಬೇಕು. ದತ್ತಪೀಠ ವ್ಯಾಪ್ತಿಯಲ್ಲಿ ಬರುವ ಜಮೀನಿನಲ್ಲಿ ಗೋಮಾಳ, ಶಾಲೆ, ಆಟದ ಮೈದಾನ, ಸ್ಮಶಾನ, ವಸತಿ ರಹಿತ ಕುಟುಂಬಗಳ ನಿವೇಶನ ಮತ್ತು ಈಗಾಗಲೇ ಮನೆ ನಿರ್ಮಾಣ ಮಾಡಿಕೊಂಡಿರುವ ಜಮೀನನ್ನು ಬಿಟ್ಟು, ಸ್ಥಳೀಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲಂಪುರ ಮತ್ತು ಕೈಮರ ರಸ್ತೆಯಲ್ಲಿರುವ ಸರ್ಕಾರಿ ಮತ್ತು ಒತ್ತುವರಿ ಭೂಮಿಯ ಮಾಹಿತಿ ನೀಡುವುದು. ಅಕ್ರಮವಾಗಿ ನಿರ್ಮಾಣ ಮಾಡಿರುವ ರೆಸಾರ್ಟ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಖರಾಯಪಟ್ಟಣದ ಶಕುನಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ತಂಗುದಾಣದ ಕಾರ್ಯ ಸಂಪೂರ್ಣಗೊಂಡಿಲ್ಲ. ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.