Advertisement

ಅಧ್ಯಯನದೊಂದಿಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ

12:34 PM Sep 04, 2017 | |

ಬಸವನಬಾಗೇವಾಡಿ: ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬುರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಬಸವೇಶ್ವರ ದೇವಸ್ಥಾನದ ಇಂಟರ್‌ ನ್ಯಾಶನಲ್‌ ಶಾಲೆ ಮೈದಾನದಲ್ಲಿ ರವಿವಾರ ಕರ್ನಾಟಕ ಮಿನಿ ಫುಟ್‌ಬಾಲ್‌ ಅಸೋಸಿಯೇಶನ್‌ ಹಾಗೂ ಬಸವೇಶ್ವರ ದೇವಸ್ಥಾನದ ಇಂಟರ್‌ ನ್ಯಾಶನಲ್‌ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಮಿನಿ ಫುಟ್‌ಬಾಲ್‌ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹೆಚ್ಚು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾ ಚಟುವಟಿಕೆಗಳು ಜರುಗಿದಾಗ
ಮಾತ್ರ ಇಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅವಕಾಶ ದೊರಕದಂತಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಚಟುವಟಿಗಳು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿ ಎಂದು ಹೇಳಿದರು.

ಪ್ರಾಥಮಿಕ ಹಂತದಿಂದಲೇ ದೈಹಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಪ್ರಜೆಗಳ ನಿರ್ಮಾಣ ಮಾಡುವುದು ಅಗತ್ಯವಿದೆ. ಸದೃಢವಾದ ಶರೀರವಿದ್ದರೆ ಮಾತ್ರ ಬೌದ್ಧಿಕವಾಗಿ ಬೆಳೆಯಲು ಪೂರಕವಾಗುತ್ತದೆ. ವಿದ್ಯಾರ್ಥಿಗಳು ತಾವು ಗಳಿಸಿದ ಜ್ಞಾನವನ್ನು ಸಾಮರ್ಥಯವನ್ನಾಗಿ ಪರಿವರ್ತಿಸಿ ತನಗಾಗಿ, ದೇಶದ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಂಡರೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಜ್ಞಾನ ಹೊಂದುವಂತಾಗಬೇಕೆಂದರು.

ಪ್ರಪಂಚದ ಪ್ರಸಿದ್ಧ ಕ್ರೀಡೆಗಳಲ್ಲಿ ಫುಟ್‌ಬಾಲ್‌ ಒಂದಾಗಿದೆ. ಈ ಕ್ರೀಡೆ ಕ್ರಿ.ಪೂ ಕಾಲದಿಂದಲೂ ಬಂದಿದೆ. ಫುಟ್‌ಬಾಲ್‌ದಲ್ಲಿ ಪೀಲೆ, ಮಡೋನಾ ಸೇರಿದಂತೆ ಶ್ರೇಷ್ಠ ಕ್ರೀಡಾಪಟುಗಳಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟ ಹಮ್ಮಿಕೊಂಡಿರುವದ ಶ್ಲಾಘನೀಯ ಎಂದರು.

Advertisement

ವಿಜಯಪುರ ಸೈನಿಕ ಶಾಲೆ ಪ್ರಾಚಾರ್ಯ ಕರ್ನಲ್‌ ಬಿಸ್ವಾಸ್‌ ಥೋಮಜಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭಾವಿ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಲು ಬೇಕಾದ ಅಂಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ವ್ಯಾಸಂಗದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಸದೃಢ ದೇಹವನ್ನು ಹೊಂದುವಂತಾಗಬೇಕು. ಈ ಭಾಗದಲ್ಲಿ ಬಸವೇಶ್ವರ ದೇವಸ್ಥಾನದ ಇಂಟರ್‌ ನ್ಯಾಶನಲ್‌ ಶಾಲೆ ಇಲ್ಲಿನ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಯಿಂದ ಉತ್ತಮ ಪ್ರತಿಭೆಗಳು ಹೊರಬರುವಂತಾಗಲಿ ಎಂದರು.

ಕರ್ನಾಟಕ ಮಿನಿ ಫುಟ್‌ಬಾಲ್‌ ಅಸೋಶಿಯೇಶನ್‌ ಕಾರ್ಯದರ್ಶಿ ರಾಜಕುಮಾರ ಹಲಬುರಗೆ ಮಾತನಾಡಿ, ತಾಲೂಕು ಮಟ್ಟದಲ್ಲಿ ಇದೇ ಮೊದಲ ಬಾರಿ ರಾಜ್ಯಮಟ್ಟದ ಮಿನಿ ಫುಟ್‌ಬಾಲ್‌ ಕ್ರೀಡಾಕೂಟ ಹಮ್ಮಿಕೊಂಡಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳು ಅ. 12ರಂದು ಬೀದರನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿವೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 30 ರಾಜ್ಯಗಳ ತಂಡಗಳು ಭಾಗವಹಿಸಲಿವೆ ಎಂದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕೂಡಲಸಂಗಮ ಅಭಿವೃದ್ದಿ ಮಂಡಳಿ ಅಯುಕ್ತ ಮಹಾದೇವ ಮುರಗಿ, ಶಾಲಾ ಸಮಿತಿ ಉಪಾಧ್ಯಕ್ಷ ಎಂ.ಎಸ್‌. ಕೊಟ್ಲಿ, ಸದಸ್ಯರಾದ ಅನಿಲ ಅಗರವಾಲ, ಸಿದ್ದಣ್ಣ ಮೋದಿ, ಎಸ್‌.ಎಸ್‌. ಝಳಕಿ, ಡಾ| ಶೋಭಾ ಪಾಟೀಲ, ರವಿ ರಾಠೊಡ, ಸಿಪಿಐ ಮಹಾದೇವ ಶಿರಹಟ್ಟಿ, ಪ್ರಾಚಾರ್ಯೆ ರೋಹಿಣಿ ರೋಣದ ಇದ್ದರು.

ಎಸ್‌.ಎಂ. ಬಿಷ್ಟಗೊಂಡ ಸ್ವಾಗತಿಸಿದರು. ಎಸ್‌.ಪಿ.ಸಾಳುಂಕೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next