ಕಂಪ್ಲಿ: ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಕಮ್ಮವಾರಿ ಸಮುದಾಯದವರು ಜಾತಿ, ಮತ, ಧರ್ಮ, ಪಂಥಗಳ ಬೇಧಭಾವವಗಳಿಲ್ಲದೆ ಎಲ್ಲಾ ವರ್ಗದವರಿಗೂ ಉತ್ತಮ ಸೇವಾ ಮನೋಭಾವನೆಯಿಂದ ಸಂಸ್ಥೆಯ ಮೂಲಕ ಶಿಕ್ಷಣ ನೀಡುತ್ತಿದೆ ಎಂದು ಕಂಪ್ಲಿ ಫಿರ್ಕ ಕಮ್ಮವಾರಿ ಸಮುದಾಯದ ಅಧ್ಯಕ್ಷ ಅಲ್ಲು ಅಶ್ವಥ್‌ನಾಯ್ಡು ತಿಳಿಸಿದರು.
ಪಟ್ಟಣದ ಕುರುಗೋಡು ರಸ್ತೆಯ ಕಮ್ಮವಾರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮುದಾಯದ ವಿಜಯನಗರ ಪ್ರಾಥಮಿಕ, ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ಅತ್ಯಂತ ಕಡಿಮೆ ಶುಲ್ಕದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹತ್ತನೇ ತರಗತಿಯವರೆಗೂ ಶಿಕ್ಷಣ ನೀಡುತ್ತಿದೆ. ಜೊತೆಗೆ ಹತ್ತನೇ ತರಗತಿಯಲ್ಲಿ ಪ್ರತಿವರ್ಷವೂ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ ಎಂದು ಶಿಕ್ಷಕರ ಶ್ರಮ ಶ್ಲಾಘಿಸಿದರು.
ಶಾಲೆಗೆ 50ಸಾವಿರ ರೂ. ವೆಚ್ಚದಲ್ಲಿ ಕ್ರೀಡಾಸಾಮಗ್ರಿಗಳನ್ನು ನೀಡಿದ ಸಂಘದ ಮಾಜಿ ಅಧ್ಯಕ್ಷರಾದ ಚಿಗರುಪಾಟಿ ರಾಮಬಸವೇಶ್ವರರಾವ್ ಅವರ ಸೇವೆ ಸ್ಮರಿಸಿದ ಅವರು, ತಮ್ಮ ಸಂಸ್ಥೆಯ ಶಿಕ್ಷಣ ಸಂಸ್ಥೆಯನ್ನು ಜಿಲ್ಲೆಯಲ್ಲಿಯೇ ಉತ್ತಮ ಶಾಲೆಯನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಪೋಷಕರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅನೇಕ ಶಿಕ್ಷಣ ಪ್ರೇಮಿಗಳು, ಗಣ್ಯರು ಶಾಲೆಯ ಸಾಧನೆಯನ್ನು ಕುರಿತು ಮಾತನಾಡಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಹತ್ತನೇ ತರಗತಿಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು. ಗಣ್ಯರಾದ ಚಿಗರುಪಾಟಿ ರಾಮಬಸವೇಶ್ವರರಾವ್, ಪುರಸಭೆ ಅಧ್ಯಕ್ಷ ಎಂ.ಸುಧೀರ, ಸದಸ್ಯರಾದ ಭಟ್ಟಾ ಪ್ರಸಾದ್, ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ಪ್ರಭಾರಿ ಉಪಪ್ರಾಚಾರ್ಯ ಎಸ್.ಜಿ. ಚಿತ್ರಗಾರ, ಕೆ.ವಿಜಯಭಾಸ್ಕರರಾವ್, ಎಂ.ನಾಗರಾಜ, ಕಾರ್ಯದರ್ಶಿ ನರಶೆಟ್ಟಿ ಕೊಂಡಯ್ಯ, ಪಿ.ರಘುರಾಮಯ್ಯ, ಸಾಯಿಬಾಬ, ಪುರಿಮೆಟ್ಲ ಚಂದ್ರಶೇಖರ್, ಡಿ.ನಾಗೇಶ್ವರರಾವ್, ಜಿ.ಶಂಕರನಾರಾಯಣ, ವೆಮೂರಿ ಪ್ರಸಾದ್‌ರಾವ್, ಕೊನೇರು ರಾಮಕೃಷ್ಣ,ಎನ್.ಪುರುಷೋತ್ತಮ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮೂಹ ನೃತ್ಯಗಳು ಪಾಲಕರ, ಪೋಷಕರ ಗಮನ ಸೆಳೆದವು. ಮುಖ್ಯ ಶಿಕ್ಷಕ ವಿಷ್ಣು ಪ್ರಾಸ್ತಾವಿಕವಾಗಿ ಮಾತನಾಡಿದರು.