ಕಲಬುರಗಿ: ವೈಜ್ಞಾನಿಕ ಮನೋಭಾವ ದೇಶದ ಪ್ರಗತಿಗೆ ಪೂರಕವಾಗಿದೆ. ಇಂದಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಎ.ಎಚ್. ರಾಜಾಸಾಬ್ ಹೇಳಿದರು.
ಫೆ.28ರಂದು ನಡೆಯಲಿರುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಅಜೀಂ ಪ್ರೇಮಜಿ ಫೌಂಡೇಶನ್, ಅಶ್ವಿನಿ ಮೆಡಿಕಲ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಭರತ ಖಂಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಕೃಷ್ಟ ಸ್ಥಿತಿಯಲ್ಲಿತ್ತು. ಪ್ರಪಂಚಕ್ಕೆ ಶೂನ್ಯದ ಪರಿಕಲ್ಪನೆ ನೀಡಿದ ದೇಶ ನಮ್ಮದು. ಆದರೆ, ಬ್ರಿಟಿಷರ ಆಳ್ವಿಕೆಯಿಂದ ದೇಶದ ವಿಜ್ಞಾನ ಸೊರಗಿದೆ. ಈಗ ಜಗತ್ತಿನ ಚಿಕ್ಕ ರಾಷ್ಟ್ರಗಳು ಮುಂದುವರಿದಿದ್ದು, ವಿಜ್ಞಾನ ಪರಿಶೋಧನೆ, ಸಂಶೋಧನೆಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳತ್ತ ಭಾರತ ನೋಡಬೇಕಾಗಿದೆ ಎಂದು ಹೇಳಿದರು.
ಪ್ರಶ್ನೆ ಮಾಡುವ ಮನೋಭಾವ, ಸತ್ಯಾಸತ್ಯತೆ ತಿಳಿದುಕೊಳ್ಳುವುದೇ ವಿಜ್ಞಾನವಾಗಿದೆ. ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಜೀವನ, ವೈಜ್ಞಾನಿಕತೆ ಪ್ರೋತ್ಸಾಹಿಸಿದರೆ ವಿಜ್ಞಾನ ಬೆಳೆಯುತ್ತಿದೆ.
ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಅಳವಡಿಸಿದಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸುವುದು ಸಂವಿಧಾನಿಕ ಹಕ್ಕಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ಮಹತ್ವ ಕೊಡಬೇಕೆನ್ನುವ ಉದ್ದೇಶದಿಂದ ಎನ್‌ಸಿಟಿಇ ಅಳವಡಿಸಿಕೊಳ್ಳಲಾಗಿದೆ. ಪಠ್ಯಕ್ರಮ ಆಳ, ಗಂಭೀರ ಮತ್ತು ಕಠಿಣವಾಗಿದೆ. ಆದ್ದರಿಂದ ಕಳೆದ ವರ್ಷ ಜಿಲ್ಲೆಯ ನೂರು ಪ್ರೌಢಶಾಲೆಗಳಲ್ಲಿ ವಿಜ್ಞಾನ ಗ್ರಂಥಾಲಯ ಕಿಟ್ ಒದಗಿಸಲಾಗಿದೆ. ಮುಂದಿನ ವರ್ಷ ಎಚ್‌ಕೆಆರ್‌ಡಿಬಿ ವತಿಯಿಂದ ವಿಜ್ಞಾನ ಮತ್ತು ಗಣಿತ ಕಿಟ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ತೃಪ್ತಿ ದೇಸಾಯಿ ಮಾತನಾಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್.ಲಕ್ಷ್ಮೀನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜೀಂ ಪ್ರೇಮಜಿ ಫೌಂಡೇಶನ್‌ನ ಡಾ| ಜಗನ್ನಾಥ ಮಾತನಾಡಿದರು.
ಉದ್ಘಾಟನಾ ಸಮಾರಂಭದ ಬಳಿಕ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ನಡೆಯಿತು. ಡಾ| ಎ.ಎಚ್. ರಾಜಾಸಾಬ್ ಕಾರ್ಯಾಗಾರ ನಡೆಸಿಕೊಟ್ಟರು. 120ಕ್ಕೂ ಅಧಿಕ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಇಂದು ಜಿಲ್ಲೆಯಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಕಳೆದ ವರ್ಷ 400 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದರೂ ಕೇವಲ 25 ಶಿಕ್ಷಕರ ಮಾತ್ರ ದೊರೆತಿದ್ದರು. ಹೀಗಾಗಿ ಪ್ರಸ್ತಕ ವರ್ಷಕ್ಕೆ ಇಂದು ಮತ್ತೆ 400 ಜನ ವಿಜ್ಞಾನ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ.
ಶಾಂತಗೌಡ ಪಾಟೀಲ, ಡಿಡಿಪಿಐ