ಡಿಕೆಶಿಗೆ ಕೆಪಿಸಿಸಿ ಪಟ್ಟ ಸಿಕ್ಕರೆ ಜೆಡಿಎಸ್‌ಗೆ ಮತಬ್ಯಾಂಕ್ ಕೈ ತಪ್ಪುವ ಆತಂಕ
ಪಕ್ಷ ಸಂಘಟನೆಗೆ ಬದಲಿ ಕಾರ್ಯತಂತ್ರಕ್ಕೆ ಮುಂದಾದ ಮಾಜಿ ಪ್ರಧಾನಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿ.ಕೆ.ಶಿವಕುಮಾರ್ ಪಾಲಾದರೆ ಒಕ್ಕಲಿಗ ಸಮುದಾಯದ ಮತಬ್ಯಾಂಕ್ ಕೈ ತಪ್ಪುವ ಆತಂಕ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಬದಲಿ ಕಾರ್ಯತಂತ್ರ ರೂಪಿಸಲು ಜೆಡಿಎಸ್ ಮುಂದಾಗಿದೆ. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರೇ ಮುಂದುವರಿದು ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಕೆಲವು ಜೆಡಿಎಸ್ ನಾಯಕರು ಕಾಂಗ್ರೆಸ್‌ನತ್ತ ಚಿತ್ತ ಹರಿಸುವ ಸಂಭವವೂ ಇರುವುದರಿಂದ ಪಕ್ಷ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೂರದ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ನಡುವೆಯೇ ಪಕ್ಷ ಸಂಘಟನೆಯ ರೂಪು-ರೇಷೆ ಸಿದ್ಧಪಡಿಸುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಪುನಶ್ಚೇತನಗೊಳಿಸಲು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಎಚ್.ಮುನಿಯಪ್ಪ, ಡಾ| ಜಿ. ಪರಮೇಶ್ವರ್, ರಮೇಶ್ ಕುಮಾರ್, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಅವರಿಗೆ ಪ್ರಮುಖ ಜವಾಬ್ದಾರಿ ನೀಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ದೇವೇಗೌಡರು, ಜೆಡಿಎಸ್‌ನಲ್ಲೂ ಹೊಸ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಗಂಭೀರ ಚಿಂತೆಯಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ರೇಸ್‌ಗೆ ಬರಲಿದ್ದಾರೆ. ಈ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಸಮುದಾಯ ಅವರ ಬೆಂಬಲಕ್ಕೆ ನಿಲ್ಲಬಹುದು. ಇದೇ ರೀತಿ ಹಿಂದೆ ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ. ದೇವೇಗೌಡರ ಪರ ಅನಂತರ ಎಚ್.ಡಿ. ಕುಮಾರಸ್ವಾಮಿಯವರ ಪರ ಸಮುದಾಯ ನಿಂತಿತ್ತು.
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ನಗರ, ಗ್ರಾಮಾಂತರ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್ ಪರ ಎಂಬಂತಿತ್ತು. ಆದರೆ ಲೋಕಸಭೆ ಹಾಗೂ ಉಪ ಚುನಾವಣೆ ಬಳಿಕ ಜೆಡಿಎಸ್‌ನ ಭದ್ರಕೋಟೆಗೆ ಬಿಜೆಪಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಗ್ಗೆ ಹಾಕಿದೆ. ಈಗ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಸಮುದಾಯ ಅತ್ತ ವಾಲಬಹುದು ಎಂಬ ಆತಂಕವೂ ಜೆಡಿಎಸ್ ನಾಯಕರಿಗೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
- ಎಸ್. ಲಕ್ಷ್ಮೀನಾರಾಯಣ