ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರು ಅನುಮಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಆತಂಕವುಂಟು ಮಾಡಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೆ ನೀಡಿ “ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದಾರೆ.
ದೇವೇಗೌಡರ ಹೇಳಿಕೆಯಿಂದ ಸರ್ಕಾರದ ಭವಿಷ್ಯಕ್ಕೆ ಧಕ್ಕೆಯಾಗಬಹುದು ಎಂಬ ಮಾತುಗಳ ಹಿನ್ನೆಲೆಯಲ್ಲಿ, ಐದು ವರ್ಷ ಜೆಡಿಎಸ್‌ನವರೇ ಮುಖ್ಯಮಂತ್ರಿ ಎಂದು ಬರೆದುಕೊಟ್ಟಿರುವುದರಿಂದ ಕಾಂಗ್ರೆಸ್‌ನಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.
ಈ ಮಧ್ಯೆ, ದೇವೇಗೌಡರ ಹೇಳಿಕೆ ಬೆನ್ನಲ್ಲೇ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಮುನಿರತ್ನ, ಬೈರತಿ ಬಸವರಾಜು, ಬೈರತಿ ಸುರೇಶ್, ಆನೇಕಲ್ ಶಿವಣ್ಣ ಸೇರಿ ಹಲವು ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ತೊಂದರೆ ಇಲ್ಲ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮಾಡಬೇಕೆಂಬ ಉದ್ದೇಶದಿಂದ ರಾಹುಲ್‌ಗಾಂಧಿ ಅವರು ಜೆಡಿಎಸ್ ನಾಯಕರೊಂದಿಗೆ ಮಾತನಾಡಿ ಮನವೊಲಿಸಿದ್ದರು. ಇದೀಗ ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಸಾಮಾನ್ಯ. ಅದನ್ನು ಅನುಸರಿಸಿಕೊಂಡು ಹೋಗುವುದೇ ಮೈತ್ರಿ ಧರ್ಮ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಶಕ್ತಿ ತುಂಬಿದ್ದೇವೆ: ದೇವೇಗೌಡರು ಹಿರಿಯ ನಾಯಕರು ನಾನು ಅವರ ಹೇಳಿಕೆ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸ್ಥಿರವಾಗಿರಲು ನಾವು ಸಂಪೂರ್ಣ ಶಕ್ತಿ ತುಂಬಿದ್ದೇವೆ. ಕುಮಾರಸ್ವಾಮಿಯವರೇ ಐದು ವರ್ಷ ಮುಖ್ಯಮಂತ್ರಿ ಎಂದು ಬರೆದುಕೊಟ್ಟಿದ್ದೇವೆ. ಚುನಾವಣೆ ಬರಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣೆಗೆ ಹೋಗಲು ಯಾರಿಗೂ ಮನಸಿಲ್ಲ. ಬಿಜೆಪಿಯವರಿಗೆ ಈ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ಅವರು ಆಪರೇಷನ್ ಕಮಲಕ್ಕೆ ಯಾರಿಗೆ ಹಣ ನೀಡಿದ್ದಾರೆಯೋ ಅವರಿಂದ ವಾಪಸ್ ಕೇಳುತ್ತಿದ್ದಾರೆ ಎಂದು ಹೇಳಿದರು.
ಮಾತಿಗೆ ತಪ್ಪುವುದಿಲ್ಲ: ಕುಂದಗೋಳದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಹುಲ್‌ಗಾಂಧಿಯಾಗಲಿ ನಾವಾಗಲಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ದೇವೇಗೌಡರು ತಲೆಕೆಡಿಸಿಕೊಳ್ಳುವುದು ಬೇಡ. ಸರ್ಕಾರ ಸುಭದ್ರವಾಗಿದೆ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.