Advertisement

ದೇವೇಗೌಡರ ಕುಟುಂಬ ಒಡೆಯಲು ಸಾಧ್ಯವಿಲ್ಲ

11:21 AM Apr 30, 2017 | Team Udayavani |

ಯಾದಗಿರಿ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಕುಟುಂಬ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಡಿ. ರೇವಣ್ಣ ಹೇಳಿದರು. ತಾಲೂಕಿನ ಯರಗೋಳ ಗ್ರಾಮದಲ್ಲಿ
“ಜೆಡಿಎಸ್‌ ನಡಿಗೆ ಬದಲಾವಣೆ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಣ್ಣ-ತಮ್ಮಂದಿರಲ್ಲಿ ಒಡಕು ಮೂಡಿಸಿ ದೇವೇಗೌಡರ ಕುಟುಂಬ ಒಡೆಯುವ ಹುನ್ನಾರ ನಡೆಯುವುದಿಲ್ಲ. ದೇವೇಗೌಡರು ಬದುಕಿರುವವರೆಗೆ ಅವರ ತೀರ್ಮಾನವೇ ಅಂತಿಮ. ಅವರು ಹೇಳಿದಂತೆ ಪಕ್ಷದ ಕಾರ್ಯಚಟುವಟಿಕೆ ನಡೆಯುತ್ತವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಜೆಡಿಎಸ್‌ ಗುರಿ ಎಂದು ಹೇಳಿದರು.

Advertisement

2008ರ ಬಿಜೆಪಿ ಹಾಗೂ 2013ರ ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ, ಜೆಡಿಎಸ್‌ ಪರ ಒಲವು ವ್ಯಕ್ತಪಡಿಸಿದ್ದಾರೆ. 2018ರ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. 224 ಕ್ಷೇತ್ರಗಳಲ್ಲೂ ಪಕ್ಷ ಸ್ವತಂತ್ರವಾಗಿ ಸ್ಪಧಿìಸಲಿದೆ ಎಂದು ಹೇಳಿದರು.

ಈಗಲೇ ಸಾಲ ಮಾಡಿ: ರೈತರ ಸಾಲಮನ್ನಾ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರಾಷ್ಟ್ರೀಕೃತ, ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನಲ್ಲಿರುವ ರೈತರ ಸಾಲಮನ್ನಾ ಮಾಡುವುದು ಶತಸಿದ್ಧ. ಆದ್ದರಿಂದ ರೈತರು ಈಗಲೇ ಬ್ಯಾಂಕ್‌ಗಳಲ್ಲಿ ಸಾಲ
ಮಾಡಿ ಎಂದಾಗ ಸಭೆಯಲ್ಲಿ ನಗೆ ಚಿಮ್ಮಿತ್ತು.

ಉ.ಕ.ದಲ್ಲಿ ಹೊರಟ್ಟಿ ನೇತೃತ್ವದಲ್ಲಿ ಚುನಾವಣೆ ಸಿದ್ಧತೆ
ಹುಬ್ಬಳ್ಳಿ:
ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
ಬಸವ ಜಯಂತಿ ಪ್ರಯುಕ್ತ ಬಸವ ವನದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ 40-45 ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿ. ಈ ದಿಸೆಯಲ್ಲಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ತಯಾರಿ ಆರಂಭಿಸಲಾಗುವುದು ಎಂದರು. ಮೂರು ದಿನ ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ
ಸಭೆ ನಡೆಸಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ, ಕಾರವಾರ ಸೇರಿ ವಿವಿಧೆಡೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದು
ತಿಳಿಸಿದರು. ಜೆಡಿಎಸ್‌ ಮುಖಂಡರಾದ ಬಸವರಾಜ ಹೊರಟ್ಟಿ, ಅಲ್ಕೋಡ ಹನುಮಂತಪ್ಪ, ರಾಜಣ್ಣ ಕೊರವಿ
ಇತರರಿದ್ದರು.

ಚುನಾವಣೆಯಲ್ಲಿ  ಜೆಡಿಎಸ್‌ ಏಕಾಂಗಿ ಸ್ಪರ್ಧೆ: ದತ್ತಾ
ಕಡೂರು:
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರದಲ್ಲಿಟ್ಟು ಜೆಡಿಎಸ್‌ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಪಕ್ಷದ ರಾಜ್ಯ ವಕ್ತಾರ ಹಾಗೂ ಶಾಸಕ ವೈ.ಎಸ್‌.ವಿ. ದತ್ತಾ
ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು
ನಿಲ್ಲಿಸದಿರುವುದಕ್ಕೆ ಬೇರೆ ಆರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಆಗಿಲ್ಲ. ರಾಜ್ಯಕ್ಕೆ ಈ ಪಕ್ಷಗಳ ಕೊಡುಗೆ ಏನೂ ಇಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಮಾತ್ರ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದು ಹೇಳಿದರು. ಮಾಜಿ ಸಂಸದ ಎಚ್‌. ವಿಶ್ವನಾಥ್‌ ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಶ್ವನಾಥ್‌ ಪಕ್ಷಕ್ಕೆ ಬಂದರೆ ಸ್ವಾಗತಿಸಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next