Advertisement

ದೇವೇಗೌಡರಿಗೆ ಪ್ರತಿಕ್ಷಣ “ಮೈತ್ರಿ ನೋವು’

11:39 PM Jun 28, 2019 | Team Udayavani |

ಬೆಂಗಳೂರು: “ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಿಂದ ಪ್ರತಿಕ್ಷಣ ಎಷ್ಟು ನೋವು ಅನುಭವಿಸುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೇಸರ ಹೊರಹಾಕಿದರು.

Advertisement

ಜೆಡಿಎಸ್‌ ಕಚೇರಿಯಲ್ಲಿ ನಡೆದ ಎಸ್ಸಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದಲೇ ಕಾಂಗ್ರೆಸ್‌ ಸೋತಿದೆ ಎಂದು ಪದೇಪದೆ ಕೆಲವು ನಾಯಕರು ಹೇಳುತ್ತಿದ್ದಾರೆ. ಜೆಡಿಎಸ್‌ ಜತೆ ಸೇರಿದ್ದೇ ಸೋಲಿಗೆ ಕಾರಣ ಎಂದು ಹೇಳುತ್ತಿರುವುದರಿಂದ ಎಷ್ಟು ನೋವಾಗುತ್ತಿದೆ ಎಂಬುದು ನನಗೆ ಮಾತ್ರ ಗೊತ್ತು’ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಗೋ ಸರ್ಕಾರ ನಡೆಸುತ್ತಿದ್ದಾರೆ. ಎಷ್ಟು ಕಷ್ಟದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎನ್ನುವುದು ನನಗೆ ಮಾತ್ರ ಗೊತ್ತು. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳಿಲ್ಲ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ,

37 ಸೀಟು ಪಡೆದ ನಾವು ಮುಖ್ಯಮಂತ್ರಿ ಬೇಕೆಂದು ಕೇಳುವುದು ಯಾವ ಧರ್ಮ? ದೆಹಲಿ ಹೈಕಮಾಂಡ್‌ ಬಂದು ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಬೇಕು ಎಂದಿದ್ದರು. ಆ ಸಂದರ್ಭದಲ್ಲಿ 2008ರ ಸರ್ಕಾರದಲ್ಲಾದ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೆವು ಎಂದು ವಿವರಿಸಿದರು.

ಕಾಂಗ್ರೆಸ್‌ನ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ ಅಥವಾ ಯಾರನ್ನಾದರೂ ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಆದರೂ ಕಾಂಗ್ರೆಸ್‌ ಹೈಕಮಾಂಡ್‌ ಕುಮಾರಸ್ವಾಮಿಯವರನ್ನೇ ಸಿಎಂ ಮಾಡಿ ಎಂದಿದ್ದರು. ಈಗ ಕೆಲವು ನಾಯಕರು ಜೆಡಿಎಸ್‌ ಸಹವಾಸ ಮಾಡಿ ಸೋಲಾಯಿತು ಎಂದು ಹೈಕಮಾಂಡ್‌ಗೆ ಹೇಳಿದ್ದಾರೆ.

Advertisement

ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ರೀತಿಯಲ್ಲೂ ಮಾತಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನೇ ಕಾಂಗ್ರೆಸ್‌ ಎರಡು ಬಾರಿ ಸೋಲಿಸಿದೆ. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಲು ಒಕ್ಕಲಿಗರು ಕಾರಣವೇ?

ಕೋಲಾರದಲ್ಲಿ ಕಾಂಗ್ರೆಸ್‌ ಸೋಲಲು ಜೆಡಿಎಸ್‌ ಕಾರಣವೇ? ಖರ್ಗೆ, ದೇವೇಗೌಡ ಸೋಲಬಾರದಿತ್ತು ಎಂದು ಜನಸಾಮಾನ್ಯರು ಮಾತಾಡುತ್ತಿದ್ದಾರೆ. ಯಾರನ್ನು ಯಾರು ಸೋಲಿಸಿದ್ದರು ಎಂಬುದನ್ನೂ ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದರು.

ತಾಳ್ಮೆಗೂ ಮಿತಿ ಇರುತ್ತದೆ: ಮುಖ್ಯಮಂತ್ರಿ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಹಾಗೆಲ್ಲ ಮಾಡಬಾರದು. ಮನವಿ ಕೊಟ್ಟು ಕಷ್ಟ ಹೇಳಿಕೊಳ್ಳಬೇಕಿತ್ತು. ಸಾವಿರಾರು ಜನ ಜನತಾದರ್ಶನದ ಬಳಿ ಕಾಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರೂ ಪ್ರತಿಭಟನಕಾರರು ಕೇಳಲಿಲ್ಲ. ತಾಳ್ಮೆಗೂ ಒಂದು ಮಿತಿ ಇರುತ್ತಲ್ಲವೇ ಎಂದು ದೇವೇಗೌಡರು ಪ್ರಶ್ನಿಸಿದರು.

ರಾಜ್ಯಾಧ್ಯಕ್ಷರಾಗಿ ಎಚ್‌.ಕೆ.ಕುಮಾರಸ್ವಾಮಿ ಆಯ್ಕೆ ಖಚಿತ: ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಹಾಗೂ ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಜುಲೈ 11 ಮತ್ತು 12ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಎಸ್ಸಿ ಸಮಾವೇಶದಲ್ಲಿ ಎಚ್‌.ವಿಶ್ವನಾಥ್‌ ಅವರು ಅಧಿಕೃವಾಗಿ ಧ್ವಜ ಹಸ್ತಾಂತರ ಮಾಡಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಸಚಿವ ಪುಟ್ಟರಾಜು, ಮುಖಂಡರಾದ ರಮೇಶ್‌ಬಾಬು, ಸುರೇಶ್‌ಬಾಬು ಹಾಗೂ ಶ್ರೀಕಾಂತ್‌ ಅವರೊಂದಿಗೆ ಎಸ್ಸಿ ಸಮಾವೇಶದಲ್ಲಿ ಪೂರ್ವಭಾವಿ ಸಭೆ ನಡೆಸಿದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾಗಿ ಎಚ್‌.ಕೆ.ಕುಮಾರಸ್ವಾಮಿ ಆಯ್ಕೆಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೂ ದೇವೇಗೌಡರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದಲಿತ ಸಮುದಾಯ ಬಲಗೈ ಪಂಗಡಕ್ಕೆ ಸೇರಿರುವ ಎಚ್‌.ಕೆ.ಕುಮಾರಸ್ವಾಮಿ ಬೇಲೂರು ಕ್ಷೇತ್ರದಿಂದ ಶಾಸಕರು. ಈಗಾಗಲೇ ಜೆಡಿಎಸ್‌ ಮಹಿಳಾ ಘಟಕದ ಸ್ಥಾನ ಲಿಂಗಾಯತ ಹಾಗೂ ಯುವ ಘಟಕಕ್ಕೆ ಹಿಂದುಳಿದ ಸಮುದಾಯ ಮತ್ತು ನಗರ ಮಹಿಳಾ ಘಟಕವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next