ಬೆಂಗಳೂರು: ಉಪ ಚುನಾವಣೆ ಸೋಲಿನ ಅನಂತರವೂ ಎಚ್ಚೆತ್ತುಕೊಳ್ಳದ ಬಗ್ಗೆ ಪಕ್ಷದ ವಲಯದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶದಿಂದ ಆತಂಕಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದಲ್ಲಿ ಜೆಡಿಎಸ್ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ “ರಂಗಪ್ರವೇಶ’ಕ್ಕೆ ಮುಂದಾಗಿದ್ದಾರೆ.
ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಮಧು ಬಂಗಾರಪ್ಪ, ವೈ.ಎಸ್.ವಿ.ದತ್ತಾ, ಬಸವರಾಜ ಹೊರಟ್ಟಿ ಸಹಿತ ಪ್ರಮುಖ ನಾಯಕರ ಮನವೊಲಿಸಿ ಪ್ರಮುಖ ಜವಾಬ್ದಾರಿ ನೀಡಲು ತೀರ್ಮಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ನೇಮಕ ನೋಡಿಕೊಂಡು ಅಗತ್ಯ ಬಿದ್ದರೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನೂ ಬದಲಾಯಿಸುವ ನಿರ್ಧಾರಕ್ಕೂ ಅವರು ಬಂದಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಜನವರಿ ಎರಡನೇ ವಾರದ ಅನಂತರ ರಾಜ್ಯ ಪ್ರವಾಸಕ್ಕೆ ರೂಪು-ರೇಷೆ ನಿಗದಿಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳದಿಂದ ಹತ್ತು ದಿನಗಳ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಮುಗಿಸಿ ಬಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷ ಸಂಘಟನೆ ಸಂಬಂಧ ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಎಚ್‌ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಜಂಟಿಯಾಗಿಯೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು ಪ್ರಮುಖ ನಾಯಕರ ಜತೆಗೂಡಿ ಒಗಟ್ಟಿನ ಸಂದೇಶ ರವಾನಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.
ತಣಿಯುತ್ತಾ ಕೋಪ?
ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಅವಕಾಶಗಳಿದ್ದರೂ ಸಾಮರ್ಥ್ಯ ಇರುವ ನಾಯಕರನ್ನು ಬೆಳೆಸುವ ಕೆಲಸ ಆಗಲಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಎಲ್ಲ ವರ್ಗದವರಿಗೂ ವಿಧಾನ ಪರಿಷತ್, ನಿಗಮ-ಮಂಡಳಿ ಮತ್ತು ಇತರ ನೇಮಕಾತಿಗಳಲ್ಲಿ ಅವಕಾಶ ಮಾಡಿಕೊಡಲಿಲ್ಲ ಎಂಬ ಬೇಸರದಿಂದ ಹಲವರು ಪಕ್ಷದಿಂದ ಒಂದು ಕಾಲು ಹೊರಗಿಡುವ ತಯಾರಿಯಲ್ಲಿದ್ದಾರೆ. ಹೀಗಾಗಿ ಬೇಸರಗೊಂಡಿರುವ ನಾಯಕರ ಮನವೊಲಿಸಿ ಪಕ್ಷ ಸಂಘಟನೆಗೆ ರೂಪುರೇಷೆ ನಿಗದಿಪಡಿಸಲು ಎಚ್.ಡಿ.ದೇವೇಗೌಡರು ಮುಂದಾಗಿದ್ದಾರೆ.