ಕಲಬುರಗಿ: ಬರಗಾಲದಿಂದ ತತ್ತರಿಸಿರುವ ರೈತರ ಹೊಲಗಳಿಗೆ ಮಣ್ಣಿನ ಮಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಅಹಿಂದ ನಾಯಕ ಸಿದ್ದರಾಮಯ್ಯ ಒಟ್ಟಾಗಿ ಭೇಟಿ ಕೊಟ್ಟ ಬರ ಅಧ್ಯಯನ ನಡೆಸಲಿ ಎಂದು ಮಾಜಿ ಡಿಸಿಎಂ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದವರು ಬೀದರನಿಂದ ಬಂದು ಜೇವರ್ಗಿಗೆ ಬರ ಪರಿಶೀಲನೆಗೆ ತೆರಳುವ ಮುನ್ನ ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಭೀಕರ ಬರ ಆವರಿಸಿರುವುದರಿಂದ ಅಧ್ಯಯನಕ್ಕಾಗಿ ಬಿಜೆಪಿ ಪ್ರವಾಸ ಮಾಡುತ್ತಿದೆ. ರೈತರ ಹೊಲ, ಗದ್ದೆಗಳಿಗೆ ಹೋದರೆ ತೀವ್ರ ನೋವಾಗುತ್ತದೆ. ಪ್ರತಿ ವರ್ಷ ಬೆಳೆಯುತ್ತಿದ್ದ ಬೆಳೆಯಲ್ಲಿ ಪ್ರತಿಶತ ಹತ್ತರಷ್ಟೂ ಇಳುವರಿ ಬರುತ್ತಿಲ್ಲ. ದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ರಾಜ್ಯ ಪ್ರವಾಸ ಮಾಡಲಿ. ಆಗ ಬರದ ಬಗ್ಗೆ ಮನವರಿಕೆ ಆಗುತ್ತಿದೆ. ಅಲ್ಲದೇ, ಮುಖ್ಯಮಂತ್ರಿ ಕುಮಾರಸ್ವಾ,ಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ ಕೂಡ ಬರ ಪರಿಸ್ಥಿತಿ ತಿಳಿಯಲು ಹೊರಗೆ ಬರುತ್ತಾರೆ ಎಂದರು.
ಉಸ್ತುವಾರಿ ಸಚಿವರು ಕೂಡ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸುತ್ತಿಲ್ಲ. ನೀವು ರಾಜಕೀಯ ಮಾಡುವುದಕ್ಕೆ ಸರ್ಕಾರ ನಡೆಸುವುದಕ್ಕೆ ಮೈತ್ರಿ ಮಾಡಿಕೊಳ್ಳಿ. ಆದರೆ, ಜನರ ಸಂಕಷ್ಟಗಳಲ್ಲಿ ಮೈತ್ರಿ ಮಾಡಿಕೊಳ್ಳಬೇಡಿ. ಸರ್ಕಾರದವರು ರೈತರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಬರ ಪರಿಹಾರಕ್ಕಾಗಿ ರೈತರು ಜಾತಕ ಪಕ್ಷಿಗಳಂತೆ ಕಾದುಕುಳಿತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.
1,743 ಕೋಟಿ ರೂಪಾಯಿಯಷ್ಟು ಬೆಳೆ ನಷ್ಟವಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಸಾವಿರ ರೂ. ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ 25 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಸಾಲ ಮನ್ನಾ ಮಾಡಿದ್ದೇವೆ ಎಂದು ಪುಟ್ಟಗಟ್ಟಲೆ ಜಾಹೀರಾತು ಕೊಡಲಾಗುತ್ತಿದೆ. ರೈತರ ಸಾಲದಲ್ಲಿ ಒಂದೇ ಒಂದು ರೂಪಾಯಿ ಮನ್ನಾ ಆಗಿಲ್ಲ ಎಂದು ಚಾಟಿ ಬೀಸಿದರು.
ಜೆಡಿಎಸ್ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅಂದರೆ ರಾಜಕೀಯ ಪ್ರಣಾಳಿಕೆಗೆ ಬೆಲೆಯೇ ಇಲ್ವಾ? ಮುಂದಿನ ಬಾರಿ ಸಹ ಬಹುಮತ ಕೊಟ್ಟರೆ ಪ್ರಣಾಳಿಕೆಯಲ್ಲಿನ ಅಂಶಗಳು ಜಾರಿ ಮಾಡುವುದಾಗಿ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಕಲಿ. ಇಂತಹ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಜೆಎಸ್‌ಎಸ್ ನವರು ಸರ್ಕಾರ, ಸಿಎಂ ಪದವಿ ಮತ್ತು ಬಜೆಟ್‌ನ ಪಾವಿತ್ರತೆಯನ್ನೇ ಕಳೆಯುತ್ತಿದ್ದಾರೆ ಎಂದು ಈಶ್ವರಪ್ಪ ಅಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಆರ್.ವೆಂಕಟೇಶಕುಮಾರ ಅವರನ್ನು ಭೇಟಿ ಮಾಡಿ ಬರ ಪರಿಸ್ಥಿತಿ ಬಗ್ಗೆ ಈಶ್ವರಪ್ಪ ಚರ್ಚಿಸಿದರು. ಕೃಷಿ ಇಲಾಖೆ ಅಧಿಕಾರಿಗಳು, ಬೀದರ ಸಂಸದ ಭಗವಂತ ಖೂಬಾ, ಜಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಎಂಎಲ್‌ಸಿ ಬಿ.ಜಿ. ಪಾಟೀಲ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ಇದ್ದರು.
ರಾಜಕೀಯವಾಗಿ ಬೆತ್ತಲೆ
ರಾಮನಗರದಲ್ಲಿ ಅಭ್ಯರ್ಥಿಯನ್ನು ಅಪಹರಿಸಿ ವಾಮಮಾರ್ಗ ಹಿಡಿದಿದ್ದನ್ನು ಬಹಿರಂಗವಾಗಿ ಕಾಂಗ್ರೆಸ್ ಒಪ್ಪಿಕೊಂಡು ರಾಜಕೀಯವಾಗಿ ಬೆತ್ತಲೆಯಾಗಿದೆ. ನಾವೂ ರಾಜಕೀಯ ಮಾಡುತ್ತೇವೆ. ಆದರೆ, ನಮ್ಮದು ಕಾಂಗ್ರೆಸ್‌ನಂತಹ ರಾಜಕೀಯವಲ್ಲ. ನಮ್ಮ ರಾಜಕೀಯ ಓಪನ್ ಸಿಕ್ರೆಟ್.
ಖರ್ಗೆ ಸೋಲಿಸುವುದು ಖಚಿತ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾವು ಸೋಲಿಸಿಯೇ ಸೋಲಿಸುತ್ತೇವೆ. ಖರ್ಗೆ ಅವರನ್ನು ಸೋಲಿಸಲು ಹುರಿಯಾಳು ಬೇಕಿಲ್ಲ. ಬಿಜೆಪಿ ವ್ಯಕ್ತಿ ಕೇಂದ್ರೀಕೃತ ಪಕ್ಷವಲ್ಲ. ಕಾರ್ಯಕರ್ತರ ಪಕ್ಷ. ಖರ್ಗೆ ಅವರನ್ನು ಸೋಲಿಸಲು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾದರೇ ಸಾಕು.
ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ