Advertisement

ಮಿತ್ರ ಪಕ್ಷಕ್ಕೆ ಮತ್ತೆ ಎಚ್ಚರಿಕೆ ನೀಡಿದ ಗೌಡರು

08:40 AM Jun 23, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿ ಎರಡೂ ಪಕ್ಷಗಳು ಹೊಂದಿಕೊಂಡು ಹೋದರೆ ನಾಲ್ಕು ವರ್ಷದ ಬಳಿಕ ಚುನಾವಣೆ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಆ ಮೂಲಕ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮತ್ತೆ ಎಚ್ಚರಿಕೆ ನೀಡಿರುವ ದೇವೇಗೌಡರು, ಹೊಂದಾಣಿಕೆಯಾಗದಿದ್ದರೆ ಕಷ್ಟವಾಗಬಹುದು ಎಂಬ ಸಂದೇಶ ರವಾನಿಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಮಹಿಳಾ ಘಟಕದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಳು ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಮುಂದುವರಿದರೆ ಮಾತ್ರ ಸರ್ಕಾರ ಉಳಿದ ನಾಲ್ಕು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ ಎಂದರು.

“ಕುಮಾರಸ್ವಾಮಿ ಸರ್ಕಾರ ನಡೆಸುತ್ತಾರೆ, ನಾನು ಪಕ್ಷ ಸಂಘಟನೆ ಮಾಡುತ್ತೇನೆ. ನಾಲ್ಕು ವರ್ಷದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುತ್ತೇನೆ. ನಾನು ಅನೇಕ ಏಳು-ಬೀಳು ನೋಡಿದ್ದು, ಕುಗ್ಗೊದಿಲ್ಲ’ ಎಂದು ಹೇಳಿದರು.

ಶೀಘ್ರವೇ ಮಹಿಳಾ ಸಮಾವೇಶ: ಇದಕ್ಕೂ ಮುನ್ನ ಮಹಿಳಾ ಘಟಕದ ಸಭೆಯಲ್ಲಿ ಮಹಿಳಾ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ ಕುರಿತು ಚರ್ಚಿಸಿ, ಶೀಘ್ರದಲ್ಲೇ ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಅಂದೇ ನೂತನ ಅಧ್ಯಕ್ಷರ ಘೋಷಣೆಯನ್ನೂ ಮಾಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ದೇವೇಗೌಡರು, “ಮುಂದಿನ ತಿಂಗಳು 50 ಸಾವಿರ ಹೆಣ್ಣು ಮಕ್ಕಳನ್ನು ಸೇರಿಸಿ ಸಭೆ ಮಾಡುತ್ತೇನೆ. ಜಿಲ್ಲಾ ಘಟಕ ಪುನರ್‌ ರಚನೆ ಮಾಡಿ ಕಾರ್ಯಾಧ್ಯಕ್ಷರು, ಅಧ್ಯಕ್ಷರ ನೇಮಕ ಮಾಡುತ್ತೇನೆ. ಇನ್ನು ಮುಂದೆ ಹೊಸ ಅಧ್ಯಾಯ ಪ್ರಾರಂಭಿಸೋಣ’ ಎಂದರು.

Advertisement

“ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ನರೇಂದ್ರ ಮೋದಿ ಮಾತ್ರ ಆಸಕ್ತಿ ತೋರುತ್ತಿಲ್ಲ. ಹಿಂದೆ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ಸಿಂಗ್‌ ಅವರೂ ಆಸಕ್ತಿ ತೋರಿದ್ದರು. ಇದನ್ನು ನಾನು ಮತ್ತೆ ನೆನಪಿಸಬೇಕಿತ್ತು. ಆದರೆ, ನಾನು ಚುನಾವಣೆಯಲ್ಲಿ ಸೋತಿದ್ದೇನೆ, ಸಂಸತ್ತಿಗೆ ಹೋಗಲು ಆಗುವುದಿಲ್ಲ’ ಎಂದು ಹೇಳಿದರು.

ಮಹಿಳೆಯರ ಆಕ್ರೋಶ: ಮಹಿಳಾ ಘಟಕದ ಸಭೆಯಲ್ಲಿ ವೇದಿಕೆ ಮೆಲೆ ಕೂರಲು ಬೆಂಗಳೂರಿನವರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇತರ ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರು ಆಕ್ರೋಶ ಹೊರ ಹಾಕಿದರು. ಯಾವ ಸಭೆಯಲ್ಲಾದರೂ ನೇಮಕಾತಿಗಳಲ್ಲಿ ಬೆಂಗಳೂರಿನವರಿಗೆ ಅವಕಾಶ ಕೊಡುತ್ತೀರಿ.

ನಮಗೆ ಅವಕಾಶ ಸಿಗುವುದು ಯಾವಾಗ? ನಾವು ವೇದಿಕೆ ಮೇಲೆ ಕೂತು ಮಾತನಾಡುವುದು ಯಾವಾಗ? ನಮಗೆ ಸಾಮರ್ಥ್ಯ ಇಲ್ಲವೇ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ, ಪಕ್ಷದ ನಾಯಕರು ಸಮಾಧಾನಪಡಿಸಿ ಬೇರೆ ಜಿಲ್ಲೆಯವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸುವ ಕೆಲಸ ಮಾಡುತ್ತೇನೆ. ಅಧಿಕಾರದಲ್ಲಿದ್ದಾಗ ಮಹಿಳಾ ಮೀಸಲಾತಿ ತಂದಿದ್ದೇ ನಾನು. ದೇಶದಲ್ಲಿ ಶೇ.51 ಮಹಿಳೆಯರಿದ್ದು ಶೇ.49ರಷ್ಟು ಪುರುಷರಿದ್ದಾರೆ. ಶಿಕ್ಷಕ ವರ್ಗಕ್ಕೆ ಶೇ.50 ಮೀಸಲಾತಿ ಕೊಟ್ಟಿದ್ದೆ. ರಾಜ್ಯದಲ್ಲಿ ಪೊಲೀಸ್‌ ಇಲಾಖೆಗೂ ಮಹಿಳಾ ಮೀಸಲಾತಿ ಕೊಟ್ಟಿದ್ದೆ. ಮೀಸಲಾತಿ ಕಾರಣದಿಂದ ಮಹಿಳೆಯರು ಮೇಯರ್‌ ಸಹ ಆದರು. ಜುಲೈನಲ್ಲಿ ಮಹಿಳಾ ಸಮಾವೇಶ ಮಾಡಿ ಮಹಿಳೆಯರಿಗೂ ಪಕ್ಷದಲ್ಲಿ ಹೆಚ್ಚಿನ ಶಕ್ತಿ ನೀಡುತ್ತೇನೆ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

Advertisement

Udayavani is now on Telegram. Click here to join our channel and stay updated with the latest news.

Next