Advertisement

ದೇವರಹಳ್ಳಿ: 65 ವರ್ಷ ಹಿರಿಮೆಯ ಶಾಲೆಗೆ ಬೀಗ!

01:25 AM Jun 12, 2019 | mahesh |

ಸುಬ್ರಹ್ಮಣ್ಯ: ತಾಲೂಕಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಸುಬ್ರಹ್ಮಣ್ಯ ಗ್ರಾಮದ ದೇವರಹಳ್ಳಿಯ ವಿದ್ಯಾದೇಗುಲವನ್ನು ಈಗ ಮುಚ್ಚಲಾಗಿದೆ. ಇದು 65 ವರ್ಷ ಹಳೆಯ ಶಾಲೆ. 1954ರಲ್ಲಿ ಕೃಷಿಕ ಗಣಪಯ್ಯ ಗೌಡ ಮಾಣಿಬೈಲು ತಮ್ಮ ಮನೆ ಕೊಟ್ಟಿಗೆಯಲ್ಲಿ ಶಾಲೆ ಆರಂಭಿಸಿದ್ದರು. 1963ರಲ್ಲಿ ದೇವರಹಳ್ಳಿ ಸರಕಾರಿ ಹಿ.ಪ್ರಾ. ಶಾಲೆಯಾಗಿ ಪರಿವರ್ತನೆಗೊಂಡಿತು. ಆರಂಭದಲ್ಲಿ 1ರಿಂದ 8ರ ತನಕ, ಅನಂತರದಲ್ಲಿ 1ರಿಂದ 7 ಬಳಿಕ ಈಗ 1ರಿಂದ 5ರ ತನಕ ತರಗತಿಗಳಿದ್ದವು.

Advertisement

ನಾಲ್ವರೇ ಮಕ್ಕಳು
ಈಗ ಶಾಲೆಯಲ್ಲಿ ಎರಡನೇ ತರಗತಿ ಯಲ್ಲಿ ಇಬ್ಬರು, ನಾಲ್ಕು ಹಾಗೂ ಐದನೇ ತರಗತಿಯಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳಿದ್ದಾರೆ (ಒಟ್ಟು ನಾಲ್ಕು). ಹಾಲಿ ವರ್ಷದಲ್ಲಿ ಶಾಲೆಯಲ್ಲಿ ಶೂನ್ಯ ಮಕ್ಕಳ ದಾಖಲಾತಿ ಎಂದು ಪರಿಗಣಿಸಿ ಇಲಾಖೆಯ ಮುಂದಿನ ಆದೇಶದ ತನಕ ಶಾಲೆಯನ್ನು ಜೂ. 4ರಿಂದ ಮುಚ್ಚಲು ಸುಳ್ಯ ಕ್ಷೇತ್ರ ಶಿಕ್ಷಣ ಇಲಾಖೆ ಶಾಲಾ ಮುಖ್ಯಸ್ಥರಿಗೆ ಸೂಚಿಸಿದೆ.

ಎಲ್ಲ ಸೌಕರ್ಯಗಳಿವೆ
ದೇವರಹಳ್ಳಿ ಸರಕಾರಿ ಶಾಲೆ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದೆ. ಹಿಂದೆ 7.38 ಸೆಂಟ್ಸ್‌ ಜಾಗವಿತ್ತು. ಬಳಿಕ ಒತ್ತುವರಿಯಾಗಿದ್ದು, ಈಗ 4.66 ಸೆಂಟ್ಸ್‌ ಭೂಮಿ ಶಾಲಾ ಒಡೆತನದಲ್ಲಿದೆ. ದೇವರಹಳ್ಳಿ, ಕೇದಿಗೆಬನ, ನೇರಳಗದ್ದೆ, ಮಾಣಿಬೈಲು, ಉಪ್ಪಳಿಕೆ, ಪದೇಲ, ಮಲಯಾಳ, ಅರಂಪಾಡಿ, ಹೊಸೋಳಿಕೆ, ಪರ್ವತಮುಖೀ ಮೇರ್ಕಜೆ, ಮರಕತ ಭಾಗದ ಮಕ್ಕಳಿಗೆ ಅನುಕೂಲವಾಗಿತ್ತು.

ಸದ್ಯ ನ್ಯಾಯಾಧೀಶರಾಗಿರುವ ಚಂದ್ರಶೇಖರ ಉಪ್ಪಳಿಕೆ, ವೃತ್ತ ನಿರೀಕ್ಷಕರಾಗಿದ್ದ ಉಮೇಶ್‌ ಉಪ್ಪಳಿಕೆ, ಜಲಾನಯನ ಇಲಾಖೆ ಅಧಿಕಾರಿಯಾಗಿರುವ ಕುಸುಮಾಧಾರ ಸಹಿತ ಹಲವರು ಕಲಿತ ಶಾಲೆ ಇದು. ಲೆಕ್ಕ ಪರಿಶೋಧಕ ಸಹಿತ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹನೀಯರು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು.

ಹೆಚ್ಚು ಮತ
ದೇವರಹಳ್ಳಿ ಪುಟ್ಟ ಗ್ರಾಮವಾಗಿದ್ದರೂ ಕುಟುಂಬಗಳ ಪ್ರಮಾಣ ಹೆಚ್ಚಿದೆ. ಕೃಷಿ ಅವಲಂಬಿತರು ಇರುವ ಈ ಪರಿಸರದಲ್ಲಿ ಮೂಲ ಸೌಕರ್ಯಗಳ ಕೊರತೆಗಳ ದೊಡ್ಡ ಪಟ್ಟಿಯೇ ಇದೆ. ರಸ್ತೆ, ನೀರು, ಸಂಪರ್ಕ ವ್ಯವಸ್ಥೆಗಳು ಇಲ್ಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದ ಸಂಸದರಿಗೆ ತಾಲೂಕಿನಲ್ಲಿ ಅತೀ ಹೆಚ್ಚು ಮತ ತಂದು ಕೊಟ್ಟ ಮತಗಟ್ಟೆಯೂ ದೇವರಹಳ್ಳಿ ಆಗಿದೆ.

Advertisement

ಈ ಶೈಕ್ಷಣಿಕ ವರ್ಷದಲ್ಲಿ ಪರಿಸರದಲ್ಲಿ ಐವರು ವಿದ್ಯಾರ್ಥಿಗಳು ಒಂದನೇ ತರಗತಿ ಪ್ರವೇಶಿಸಲು ಆರ್ಹತೆ ಪಡೆದಿದ್ದರು. ಮಕ್ಕಳ ಚಟುವಟಿಕೆ ಕುಂಠಿತವಾಗುವ ಭೀತಿಯಿಂದ ಹೆತ್ತವರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಹೆತ್ತವರ ಮನವೊಲಿಸಲು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಯತ್ನಿಸಿದರೂ ಫ‌ಲ ನೀಡಿಲ್ಲ.

ಉಳಿಸುವ ಪ್ರಯತ್ನವಿಲ್ಲ?
ಒಂದು ಕಡೆ ಸರಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆ ಸುತ್ತೋಲೆಗಳನ್ನು ಹೊರಡಿಸುತ್ತಿದೆ. ಮತ್ತೂಂದು ಕಡೆ ಗ್ರಾಮೀಣ ಶಾಲೆಗಳು ಮುಚ್ಚುತ್ತಿವೆ. ಹಳ್ಳಿಗಳಲ್ಲಿ ಕೆಲವೆಡೆ ಸರಕಾರಿ ಶಾಲೆ ಉಳಿಸಲು ಸ್ಥಳಿಯರೇ ಆಸಕ್ತಿ ವಹಿಸಿ ಕೆಲ ಯೋಜನೆಗಳನ್ನು ಹಾಕಿಕೊಂಡು ಅಭಿಯಾನ ನಡೆಸುತ್ತಿದ್ದರೆ ದೇವರಹಳ್ಳಿ ಶಾಲೆಯನ್ನು ಉಳಿಸಲು ಅಂಥ ಗಂಭೀರ ಪ್ರಯತ್ನ ನಡೆದಿಲ್ಲವೆಂದೇ ಹೇಳಬೇಕು.

ತಾತ್ಕಾಲಿಕ ಮುಚ್ಚುಗಡೆ
ಶಾಲೆಯಲ್ಲಿ ಪ್ರಥಮ ತರಗತಿಗೆ ಮಕ್ಕಳ ಪ್ರವೇಶಾತಿ ಕೊರತೆ ಇದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಶಾಲೆಯನ್ನು ಮುಚ್ಚಿದ್ದೇವೆ. ಹೆತ್ತವರ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಶಾಲೆಯಲ್ಲಿ ಉಳಿದಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಅವರವರ ಹೆತ್ತವರು ಟಿ.ಸಿ. ಪಡೆದು ಬೇರೆ ಶಾಲೆಗೆ ವರ್ಗಾಯಿಸಿಕೊಂಡಿದ್ದಾರೆ. ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಿದ್ದೇವೆ.
– ಮಹದೇವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುಳ್ಯ

ಅನಿವಾರ್ಯವಾಗಿ ಮುಚ್ಚಲಾಗಿದೆ
ಶಾಲೆಯ ವ್ಯಾಪ್ತಿಯಲ್ಲಿ ಬೆರಳೆಣಿಕೆ ಸಂಖ್ಯೆಯ ಮಕ್ಕಳಿದ್ದಾರೆ. ಹೆತ್ತವರ ಸಭೆಯಲ್ಲಿ ಬೇರೆಡೆಗೆ ಮಕ್ಕಳನ್ನು ವರ್ಗಾಯಿಸದಂತೆ ಮನವೊಲಿಸುವ ಪ್ರಯತ್ನ ಮಾಡಿದೆವು. ಮಕ್ಕಳ ಚಟುವಟಿಕೆ ಕುಂಠಿತವಾಗುತ್ತದೆ ಎಂಬ ಕಾರಣ ಹೇಳಿ ವರ್ಗಾಯಿಸಿಕೊಂಡಿದ್ದಾರೆ. ಅನಿವಾರ್ಯವಾಗಿ ಶಾಲೆಯನ್ನು ಮುಚ್ಚಬೇಕಾಗಿದೆ.
– ಯಶೋಧರ ಹೊಸೋಕ್ಲು ಎಸ್‌ಡಿಎಂಸಿ ಅಧ್ಯಕ್ಷರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next