Advertisement

ದೇವಸೂಗೂರು ಗ್ರಾಪಂ ಗದ್ದುಗೆಗೆ ಜಿದ್ದಾಜಿದ್ದಿ

06:39 PM Jan 18, 2021 | Team Udayavani |

ರಾಯಚೂರು: ರಾಜ್ಯದಲ್ಲೇ ಅತಿ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲೂಕಿನ ದೇವಸೂಗೂರು ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿಗೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಾಂಗ್ರೆಸ್‌ -ಬಿಜೆಪಿ ಮಧ್ಯೆ ನೇರ ಹಣಾಹಣಿಯಿದ್ದು, ಮೀಸಲಾತಿಗಾಗಿ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. 58 ಸದಸ್ಯ ಬಲದ ಈ ಪಂಚಾಯಿತಿಯಲ್ಲಿ ಬಹುಮತಕ್ಕೆ 30 ಸ್ಥಾನ ಬೇಕಿದೆ.

Advertisement

ಆದರೆ, ಕಾಂಗ್ರೆಸ್‌, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮಬಲದಲ್ಲಿ ಗೆಲುವು ಸಾಧಿ ಸಿದ್ದು, ಐದಾರು ಸದಸ್ಯರು ಮಾತ್ರ ತಟಸ್ಥ ನಿಲುವಿನಲ್ಲಿದ್ದಾರೆ. ಹೀಗಾಗಿ ಸದಸ್ಯರ ಬೆಂಬಲ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಉಭಯ ಪಕ್ಷಗಳ ನಾಯಕರು ನಾನಾ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಅತಿ ದೊಡ್ಡ ಪಂಚಾಯಿತಿಯಾಗಿರುವ ಕಾರಣ ಬಹುತೇಕ ಎಲ್ಲ ಸಮುದಾಯದ ಜನರು ಗೆಲುವು ಸಾಧಿಸಿದ್ದಾರೆ. ಅದರಲ್ಲಿ ಹಿಂದುಳಿದ ಗಂಗಾಮತಸ್ಥ ಸಮಾಜದಿಂದ 16 ಜನ ಗೆಲುವು ಸಾಧಿಸಿದರೆ, ಲಿಂಗಾಯತ ಸಮಾಜದಿಂದಲೂ ಸಾಕಷ್ಟು ಜನ ಗೆದ್ದಿದ್ದಾರೆ. ಮೀಸಲಾತಿ ಯಾವ ಸಮುದಾಯಕ್ಕೆ
ಬಂದರೂ ಉಭಯ ಪಕ್ಷಗಳು ಅಧಿಕಾರ ಹಿಡಿಯುವ ಸಾಧ್ಯತೆಗಳು ಸಮಪ್ರಮಾಣದಲ್ಲಿವೆ. ಹೀಗಾಗಿ ಬಹುಮತಕ್ಕೆ ಬೇಕಾದ ಸಂಖ್ಯೆಗಳನ್ನು ಕ್ರೋಢೀಕರಿಸಲು ಮುಖಂಡರು ಮುಂದಾಗಿದ್ದಾರೆ.

ಲಿಂಗಾಯತರಲ್ಲಿ ಅತ್ಯುತ್ಸಾಹ: ಈ ಬಾರಿ ಲಿಂಗಾಯತ ಸಮುದಾಯದಿಂದ ಕಾಂಗ್ರೆಸ್‌ ಬಿಜೆಪಿ ಬೆಂಬಲಿತರು ಹೆಚ್ಚು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದರೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ಚುನಾಯಿತರು. ಒಂದು ವೇಳೆ ನಿರೀಕ್ಷೆಯಂತೆ ಸಾಮಾನ್ಯ ವರ್ಗಕ್ಕೆ ಮೀಸಲಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲಿಲ್ಲದ ಪೈಪೋಟಿ ಏರ್ಪಡಬಹುದು.

ಕಾಂಗ್ರೆಸ್‌ ಮತ್ತು ಬಿಜೆಪಿ ಎರಡರಲ್ಲೂ ಲಿಂಗಾಯತ ಸಮುದಾಯದ ಆರ್ಥಿಕವಾಗಿ ಪ್ರಬಲರಿರುವವರು ಗೆಲುವು ಸಾಧಿಸಿದ್ದಾರೆ. ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಮೀಸಲಾತಿ ಧ್ಯಾನ-ಪ್ರವಾಸ ಕಥನ:
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಮೀಸಲಾತಿ ಘೋಷಣೆಯಾಗಿಲ್ಲ. ಆದರೆ, ಚುನಾಯಿತರು ಕಾಂಗ್ರೆಸ್‌ ಬಿಜೆಪಿ ಬೆಂಬಲಿತರು ಎಂದು ಹೇಳಿಕೊಂಡರೂ
ಕೊನೆ ಘಳಿಗೆಯಲ್ಲಿ ಸ್ಥಾನ ಮಾನದ ಆಸೆಯಿಂದ ಪಕ್ಷಾಂತರ ಮಾಡುವ ಸಾಧ್ಯತೆಗಳಿವೆ. ಪಕ್ಷದ ಮುಖಂಡರಿಗೆ ಸದಸ್ಯರ ಮೇಲೆ ವಿಶ್ವಾಸ ಇಲ್ಲದಾಗಿದೆ.

ಹೀಗಾಗಿ ಉಭಯ ಪಕ್ಷಗಳು ತಮ್ಮ ಸದಸ್ಯರನ್ನು ಹಿಡಿದಿಡಲು ಹಲವು ತಂಡಗಳನ್ನಾಗಿ ವಿಂಗಡಿಸಿ ಪ್ರವಾಸ ಕಳುಹಿಸಿದ್ದಾರೆ. ಈಗ ಊರಲ್ಲಿ ತಟಸ್ಥ ನಿಲುವಿನ ಐದಾರು ಸದಸ್ಯರು, ಮಹಿಳಾ ಸದಸ್ಯರು ಬಿಟ್ಟರೆ ಉಳಿದೆಲ್ಲರೂ ಪ್ರವಾಸದಲ್ಲಿದ್ದಾರೆ. ಮಹಿಳಾ ಸದಸ್ಯರ ಪತಿಯರು ಕೂಡ ಪ್ರವಾಸದಲ್ಲಿದ್ದಾರೆ.

ಕಳೆದ ಬಾರಿ ಕೈಗೆ ಅಧಿಕಾರ: ಕಳೆದ ಬಾರಿ ಈ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಸಾ ಧಿಸಿತ್ತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ, ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. ಹೆಚ್ಚು ಗೆಲುವು ಸಾಧಿ ಸಿದ್ದ ಕಾಂಗ್ರೆಸ್‌ ಅನಾಯಾಸವಾಗಿ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಉಭಯ ಪಕ್ಷದ ನಾಯಕರು ತಮಗೇ ಸಂಖ್ಯಾಬಲವಿದ್ದು, ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎನ್ನುತ್ತಿವೆ. ಆದರೆ, ಬಿಜೆಪಿ ಒಂದೆರಡು ಸ್ಥಾನ ಹೆಚ್ಚಾಗಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಮೀಸಲಾತಿ ನಿಕ್ಕಿಯಾಗುವವರೆಗೂ ಏನು ಹೇಳಲಾಗದು ಎನ್ನುತ್ತಾರೆ ಮುಖಂಡರು.

ಕಣಕ್ಕಿಳಿದ ಮುಖಂಡರು
ಅತಿ ದೊಡ್ಡ ಪಂಚಾಯಿತಿ ಎಂಬ ಕಾರಣಕ್ಕೆ ಉಭಯ ಪಕ್ಷಗಳ ಮುಖಂಡರು ಕಣಕ್ಕಿಳಿದಿದ್ದಾರೆ. ಸದಸ್ಯರನ್ನು ಹಿಡಿದಿಡಲು ಹಣ ಖರ್ಚು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಶಾಸಕರು ಸೇರಿದಂತೆ ಪ್ರಭಾವಿ  ಮುಖಂಡರು ಪಂಚಾಯಿತಿ ಚುಕ್ಕಾಣಿ ಹಿಡಿಯಲು ನಾನಾ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಈ ಪಂಚಾಯಿತಿಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next