ರಾಯಚೂರು: ಅತಿ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಾಲೂಕಿನ ದೇವಸೂಗೂರು ಗ್ರಾಪಂ ಕನಿಷ್ಠ ಸ್ವತ್ಛತೆಗೂ ಒತ್ತು ಕೊಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯಿತಿ ಪಕ್ಕದ ಲೇಬರ್ ಕಾಲೋನಿಯಲ್ಲೇ ಸ್ವತ್ಛತೆ ಮರೀಚಿಕೆಯಾಗಿದ್ದು, ಅಲ್ಲಿನ ನಿವಾಸಿಗಳು ಕೊಚ್ಚೆಯಲ್ಲೇ ಕಾಲ ಕಳೆಯುವಂತಾಗಿದೆ.
58 ಸದಸ್ಯರನ್ನು ಹೊಂದಿರುವ ಈ ಪಂಚಾಯಿತಿಗೆ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನವೂ ಹರಿದು ಬರುತ್ತದೆ. ಅಲ್ಲದೇ, ರಾಜ್ಯದಲ್ಲೇ ದೊಡ್ಡ ಗ್ರಾಪಂಗಳ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿದೆ. ಮೇಲಾಗಿ ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಆರಾಧಿಸಲ್ಪಡುವ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನ, ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಆರ್‌ಟಿಪಿಎಸ್ ಇರುವುದು ಇಲ್ಲಿಯೇ. ಆದರೂ ಇಷ್ಟೊಂದು ಅವ್ಯವಸ್ಥೆ ತಾಂಡವವಾಡುತ್ತಿರುವುದು ವಿಪರ್ಯಾಸ.
ಕೆಪಿಸಿಯವರು ತಮ್ಮ ಸಿಬ್ಬಂದಿಗೆ ನಿರ್ಮಿಸಿದ ಕಾಲೋನಿಗೆ ಸೂಕ್ತ ಕೌಂಪೌಂಡ್ ನಿರ್ಮಿಸಿಕೊಂಡು ಉತ್ತಮ ವಾತಾವರಣ ಕಾಪಾಡಿಕೊಂಡಿದ್ದಾರೆ. ಆದರೆ, ಜನರ ಅಭ್ಯುದಯಕ್ಕೆ ಒತ್ತು ನೀಡಬೇಕಾದ ಸ್ಥಳೀಯ ಸಂಸ್ಥೆ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ದಿನಗೂಲಿ ಕಾರ್ಮಿಕರು, ಆರ್‌ಟಿಪಿಎಸ್ ಸೇರಿದಂತೆ ವಿವಿಧೆಡೆ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು, ಬಡವರೇ ಹೆಚ್ಚಾಗಿ ಲೇಬರ್ ಕಾಲೋನಿ ಅಕ್ಷರಶಃ ನಿರ್ಲಕ್ಷÂಕ್ಕೆ ತುತ್ತಾಗಿದೆ.
ಇಲ್ಲಿನ ತ್ಯಾಜ್ಯ ವಿಲೇವಾರಿ ಆಗುವುದೇ ಅಪರೂಪ ಎನ್ನುವಂತಾಗಿದೆ. ಅದರಲ್ಲೂ ಈಗ ಮಳೆ ಶುರುವಾಗಿದ್ದು, ಮುಖ್ಯರಸ್ತೆಯೇ ರಾಡಿ-ರಾಡಿಯಾಗಿದೆ. ಈ ಕಾಲೋನಿ ಜನ ಕುಡಿಯಲು ಬಳಸುವ ನಳಗಳ ಸುತ್ತಲೂ ಚರಂಡಿ ನೀರು ಶೇಖರಣೆಯಾಗಿದೆ. ಇದೇ ಕಾಲೋನಿಯಲ್ಲಿ ಹಿಂದೆ ಪಶು ಚಿಕಿತ್ಸಾಲಯವನ್ನು ಈಗ ಅಂಗನವಾಡಿ ಕೇಂದ್ರ ಮಾಡಲಾಗಿದೆ. ಇಂಥ ಕೇಂದ್ರಕ್ಕೆ ಬರುವ ಮಕ್ಕಳು ಆರೋಗ್ಯವಾಗಿರಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು. ವರ್ಷಕ್ಕೊಮ್ಮ ಸ್ವತ್ಛತೆ: ಈ ಲೇಬರ್ ಕಾಲೋನಿ ಹೊಂದಿಕೊಂಡಿರುವ ಮುಖ್ಯರಸ್ತೆ ರಥಬೀದಿ ಕೂಡ ಹೌದು. ಲಕ್ಷಾಂತರ ಜನ ಸೇರುವ ಶ್ರೀ ಸೂಗೂರೇಶ್ವರ ಸ್ವಾಮಿ ಜಾತ್ರೆ ವೇಳೆ ಎಳೆಯುವ ರಥ ಇದೇ ಬೀದಿಯಲ್ಲಿ ಹೋಗುತ್ತದೆ.
ಆಗ ಮಾತ್ರ ಪಂಚಾಯಿತಿ ಇದನ್ನು ಸಂಪೂರ್ಣ ಸ್ವತ್ಛಗೊಳಿಸುತ್ತದೆ. ಅದಾದ ಮೇಲೆ ಮತ್ತೆ ಸ್ವತ್ಛತೆ ಬಗ್ಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾಲೋನಿಯಿಂದ ಮೂವರು ಚುನಾಯಿತ ಸದಸ್ಯರಿದ್ದರೂ ಅವರು ಕೂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನಾವು ಒಂದೆರಡು ಬಾರಿ ಹೇಳಿದೆವು. ಸರಿಯಾದ ಸ್ಪಂದನೆ ಸಿಗದ ಕಾರಣ ಸುಮ್ಮನಾಗಿದ್ದೇವೆ ಎನ್ನುತ್ತಾರೆ ಸ್ಥಳೀಯರು.
ಲೇಬರ್ ಕಾಲೋನಿಯಲ್ಲಿ ಕಸದ ಬುಟ್ಟಿ ಇಟ್ಟು ಬಂದರೆ ಒಂದೇ ದಿನದಲ್ಲಿ ತುಂಬಿಸುತ್ತಾರೆ. ನಂತರ ರಸ್ತೆಗೆ ತ್ಯಾಜ್ಯ ಎಸೆಯುತ್ತಾರೆ. ನಲ್ಲಿಗೆ ವಾಲ್ ಕೂಡಿಸಿ ಭದ್ರತೆ ಮಾಡಿದರೂ ಅದನ್ನು ಮುರಿದು ಹಾಕುತ್ತಾರೆ. ಅಲ್ಲಿನ ಸ್ಥಳೀಯರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಶೀಘ್ರದಲ್ಲೇ ಎಲ್ಲ ಸ್ವತ್ಛಗೊಳಿಸಲು ಒತ್ತು ನೀಡಲಾಗುವುದು.
ರವಿಕುಮಾರ್, ಪಿಡಿಒ,
ದೇವಸೂಗೂರು ಪಂಚಾಯಿತಿ