ಕುಂದಾಪುರ: ದೇವರಿಗೆ ಭಕ್ತಿ ಪ್ರಧಾನವೇ ಹೊರತು ನಾವು ಅರ್ಪಿಸುವ ವಸ್ತುಗಳಲ್ಲ. ದೇವರನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಸ್ತುತಿಸಿ ಭಜಿಸಿದರೆ ದೇವರು ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಭಜನೆಯಿಂದ ದೇವರನ್ನು ಸುಲಭ ವಾಗಿ ಒಲಿಸಿಕೊಳ್ಳಲು ಸಾಧ್ಯವಿದೆ. ಭಜನೆಯು ದೇವರ ಮತ್ತು ಮನುಷ್ಯರ ನಡುವಿನ ಸೇತುವೆಯಾಗಿ ಕೊಂಡಿಯಾಗಿ ಕಾರ್ಯ ನಿರ್ವ ಹಿಸುತ್ತದೆ. ಭಜನೆಯಿಂದ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಲಭಿಸಿ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸ ಲಾಗಿದ್ದ ಧಾರ್ಮಿಕ ಸಮಾರಂಭ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಜಿ.ಟಿ. ಮಂಜುನಾಥ, ಹೊನ್ನಾವರ ಕರ್ಣಾಟಕ ಬ್ಯಾಂಕಿನ ಮೆನೇಜರ್ ಮಹಾಬಲ ಕೆ., ಪತ್ರಕರ್ತ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಗಂಗೊಳ್ಳಿಯ ಉದ್ಯಮಿ ಸಂತೋಷ ಖಾರ್ವಿ ದೊಡ್ಡಹಿತ್ಲು, ಹಿಂದೂ ಜಾಗರಣ ವೇದಿಕೆ ಮುಖಂಡ ವಾಸುದೇವ ದೇವಾಡಿಗ, ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ಮಾತೃ ಮಂಡಳಿಯ ಅಧ್ಯಕ್ಷೆ ಸುನೀಲಾ ಸಿ., ದೇವಸ್ಥಾನದ ಅಧ್ಯಕ್ಷ ಶ್ರೀಧರ ಎನ್. ಉಪಸ್ಥಿತರಿದ್ದರು.ದೇವಸ್ಥಾನದ ಮೊಕ್ತೇಸರ ಜಿ. ಈಶ್ವರ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು.