Advertisement

ದೇವರಾಜ ಅರಸು ಹಿಂದುಳಿದ ವರ್ಗದ ಆಶಾಕಿರಣ; ಶಾಸಕ ಟಿ. ರಘುಮೂರ್ತಿ

05:45 PM Aug 22, 2022 | Team Udayavani |

ಚಳ್ಳಕೆರೆ: ರಾಜ್ಯದ ಲಕ್ಷಾಂತರ ಹಿಂದುಳಿದ ವರ್ಗದ ಜನರಿಗೆ ಉತ್ತಮ ಜೀವನದ ಪರಿಕಲ್ಪನೆಯನ್ನು ಕೊಟ್ಟ ಮಹಾನ್‌ ನಾಯಕ ದೇವರಾಜ ಅರಸು. ಆತಂತ್ರ ಸ್ಥಿತಿಯಲ್ಲಿದ್ದ ಹಿಂದುಳಿದ ಸಮಾಜಕ್ಕೆ ಆಶಾಕಿರಣವಾಗಿ ಮೂಡಿ ಬಂದರು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ನಗರದ ಪಾವಗಡ ರಸ್ತೆಯ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ನಡೆದ ದೇವರಾಜ ಅರಸುರವರ 107ನೇ ಜನ್ಮದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೋಷಿತ ಸಮುದಾಯದಂತೆ ಹಿಂದುಳಿದ ವರ್ಗಗಳ ಜನರು ತಮ್ಮ ಅಳಿವು-ಉಳಿವಿನ ಬಗ್ಗೆ ಚಿಂತನೆ ನಡೆಸುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸುರವರು ಹಿಂದುಳಿದ ವರ್ಗದ ಅಭಿವೃದ್ಧಿ ಬಗ್ಗೆ ತಮ್ಮದೇಯಾದ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರು. ವಿರೋಧದ ನಡುವೆಯೂ ಹಿಂದುಳಿದ ವರ್ಗಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರು.

ನಾವೆಲ್ಲರೂ ಈ ಮಹಾನ್‌ ಪುರುಷನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ದೇವರಾಜ ಅರಸುರವರ ಹೋರಾಟ ಹಾಗೂ ಚಿಂತನೆಗಳ ಬಗ್ಗೆ ಉಪನ್ಯಾಸಕ ಬೆಳಗಟ್ಟ ನಾಗರಾಜು ಉಪನ್ಯಾಸ ನೀಡಿ, ದೇವರಾಜ ಅರಸುರವರ ಚಿಂತನೆಗಳು ಇಂದಿಗೂ ಪ್ರಸ್ತುತ. ಅವರ ಚಿಂತನೆಯ ಫಲವಾಗಿ ಹಿಂದುಳಿದ ಸಮಾಜ ಶಕ್ತಿಯಾಗಿ ಬೆಳೆದಿದೆ ಎಂದು ಸ್ಮರಿಸಿದರು.

ತಾಲೂಕು ಬಿಸಿಎಂ ಅಧಿಕಾರಿ ಡಿ.ಟಿ. ಜಗನ್ನಾಥ ಮಾತನಾಡಿ, ಕ್ಷೇತ್ರದ ಶಾಸಕರ ನಿರಂತರ ಪರಿಶ್ರಮದಿಂದ 21 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ 6 ಹಾಸ್ಟೆಲ್‌ ಕಟ್ಟಡ ನಿರ್ಮಾಣವಾಗಿವೆ. 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅನುಕೂಲವಾಗಿದೆ. ತಾಲೂಕಿನ ಒಟ್ಟು 17 ಹಾಸ್ಟೆಲ್‌ಗ‌ಳಿದ್ದು ಇಲಾಖೆ ಸೂಚನೆಯಂತೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿ ಉತ್ತಮ ಅಂಕ ಪಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದ್ದು, ಹಾಸ್ಟೆಲ್‌ನ ಎಲ್ಲಾ ವಾರ್ಡನ್‌ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನ ನೀಡುತ್ತಿದ್ದಾರೆ ಎಂದರು.

Advertisement

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್‌, ಟಿಎಸಿಎಂಸಿ ಅಧ್ಯಕ್ಷ ಕೆ.ಟಿ. ನಿಜಲಿಂಗಪ್ಪ, ತಾಪಂ ಇಒ ಜಿ.ಕೆ. ಹೊನ್ನಯ್ಯ, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ದಿವಾಕರ್‌, ಕೃಷಿ ಅ ಧಿಕಾರಿ ಅಶೋಕ್‌, ರೇಷ್ಮೆ ಇಲಾಖೆ ಅಧಿಕಾರಿ ಕೆಂಚೋಜಿ ರಾವ್‌, ಅಬಕಾರಿ ಇನ್ಸ್‌ಪೆಕ್ಟರ್‌ ತಿಪ್ಪಯ್ಯ, ನಗರಸಭೆ ನಾಮನಿರ್ದೇಶನ ಸದಸ್ಯೆ ಜಗದಾಂಬ, ಎನ್‌. ಮಂಜುನಾಥ ಮೊದಲಾದವರು ಪಾಲ್ಗೊಂಡಿದ್ದರು.

ದೇವರಾಜ ಅರಸುರವರು ಹಿಂದುಳಿದ ವರ್ಗ ಮತ್ತು ಸಮಾಜಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು ಎಂದಿಗೂ ಮರೆಯಲಾಗದು. ದಿ| ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಶ್ರಮಿಸಿದರು.
ಎನ್‌. ರಘುಮೂರ್ತಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next