ದೇವರಹಿಪ್ಪರಗಿ: ವೃದ್ಧಾಪ್ಯ, ವಿಧವಾ, ಅಂಗವಿಕಲರ ಪಿಂಚಣಿಯಂತ ಸರ್ಕಾರದ ಸೌಲಭ್ಯಗಳು ಸರಿಯಾಗಿ ಕೈ ಸೇರದೆ ವಿಳಂಬವಾಗುತ್ತಿರುವುದು ಹಾಗೂ ಹಣ ಪಡೆದು ಪಿಂಚಣಿ ನೀಡುತ್ತಿರುವ ಮುಳಸಾವಳಗಿ ಅಂಚೆ ಸಿಬ್ಬಂದಿ ವಿರುದ್ಧ ಫಲಾನುಭವಿಗಳು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ್ದ ನೂರಾರು ಮಹಿಳೆಯರು ಹಾಗೂ ವೃದ್ಧರು, ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಕಳೆದ 3-4 ತಿಂಗಳುಗಳಿಂದ ಪಿಂಚಣಿ ಸೌಲಭ್ಯಗಳು ಫಲಾನುಭವಿಗಳಿಗೆ ಸರಿಯಾಗಿ ಬರುತ್ತಿಲ್ಲ. ಬಂದ ಹಣವನ್ನು ನೀಡಬೇಕಾದರೆ ಅಂಚೆ ಬಟವಣೆದಾರ 50 ರಿಂದ 100 ರೂ. ಪಡೆಯುತ್ತಾರೆ. ಹಣ ನೀಡದಿದ್ದರೆ ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದು ಹೇಳಿ ಕಳಿಸುತ್ತಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ವಿಷಯ ತಿಳಿದ ಪಿಎಸೈ ಎಂ.ಬಿ. ಬಿರಾದಾರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಕುರಿತಂತೆ ಭರವಸೆ ನೀಡಿದರು. ನಂತರ ಪ್ರತಿಭಟನೆ ನಿರತ ಮಹಿಳೆಯರು ಉಪ ತಹಶೀಲ್ದಾರ್ ಇಂದಿರಾ ಬಳಗಾನೂರ ಅವರಿಗೆ ಮನವಿ ಸಲ್ಲಿಸಿ, ತಾವೇ ಏನಾದರೂ ಮಾಡಿ ತಿಂಗಳಿಗೆ ಸರಿಯಾಗಿ ಪಿಂಚಣಿ ಸಿಗುವಂತೆ ಮಾಡಬೇಕೆಂದು ವಿನಂತಿಸಿದರು.
ಮನವಿಗೆ ಸ್ಪಂದಿಸಿದ ಉಪ ತಹಶೀಲ್ದಾರ್ ಕೂಡಲೇ ಈ ಬಗ್ಗೆ ಮೇಲಧಿ ಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಅರವಿಂದ ನಾಯ್ಕೋಡಿ, ಅಂದಾನಯ್ಯ ಮಠಪತಿ, ನೀಲವ್ವ ಪೂಜಾರಿ, ತಾರಾಬಾಯಿ ಬಿರಾದಾರ, ದಾನಮ್ಮ ಬಿರಾದಾರ, ನಿಂಗವ್ವ ಸೊನ್ನಳ್ಳಿ, ಧಮ್ಮಿಬಾಯಿ ರಾಠೊಡ, ಕಸ್ತೂರಿಬಾಯಿ ದೊಡಮನಿ, ಬೋೕರಮ್ಮ ವಾಲೀಕಾರ, ಕವಿತಾಬಾಯಿ ರಾಠೊಡ, ರುಕ್ಮವ್ವ ಕಂಬಾರ, ಸಾಬವ್ವ ಗೊಬ್ಬೂರ, ಬೋರಮ್ಮ ದ್ಯಾಬೇರಿ, ಲೋಕವ್ವ ತಳವಾರ, ಖತೀಜಾ ಜಮಖಂಡಿ, ಶಿವಮ್ಮ ಪತ್ರಿಮಠ, ಬಸನಿಂಗವ್ವ ನಾಯ್ಕೋಡಿ, ಕಸ್ತೂರಿಬಾಯಿ ಗಳೇದ ಹಾಜರಿದ್ದರು.