ದೇವರಹಿಪ್ಪರಗಿ: ಬಾಲಕರ ಶೈಕ್ಷಣಿಕ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ವಸತಿ ನಿಲಯವಿಂದು ಬಾಲಕರು ಸೇರಿದಂತೆ ಸಿಬ್ಬಂದಿಯೂ ಇರದೇ ಸರಕಾರದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಅನಾಥವಾಗಿದೆ.
ತಾಲೂಕಿನ ಮುಳಸಾವಳಗಿ ಗ್ರಾಮದ ಸರಕಾರಿ ಮ್ಯಾಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವೇ ಈ ದುಸ್ಥಿತಿಗೆ ಒಳಗಾದ ಸುಸಜ್ಜಿತ ಕಟ್ಟಡ. ಈ ಕಟ್ಟಡದಲ್ಲಿ ವಿಶಾಲವಾದ ಆರು ಕೋಣೆಗಳು, ಐದು ಸ್ನಾನ ಗೃಹಗಳು, ಐದು ಶೌಚಾಲಯಗಳು, ಅಡುಗೆ ಮನೆ, ಕೈ ತೊಳೆದುಕೊಳ್ಳಲು ನೀರಿನ ತೊಟ್ಟಿ, ನಡುವೆ ವಿಶಾಲವಾದ ಒಳಾಂಗಣವಿದೆ.
ನಿಲಯ ಪಾಲಕರು ಇರುವ ಕೋಣೆಯಲ್ಲಿ ನಿಲಯ ಹಾಗೂ ಇಲಾಖೆ ಕುರಿತಾಗಿ ಕೊನೆಯದಾಗಿ ನಮೂದಿಸಿದ ಮಾಹಿತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹೊರಗಡೆ ಬಟ್ಟೆ ತೊಳೆಯಲು ಅಗತ್ಯವಾದ ನೀರಿನ ತೊಟ್ಟಿಗಳಿದ್ದು, ಇವುಗಳೆಲ್ಲ ಬಳಕೆಯಿಲ್ಲದ ಕಾರಣ ದುಸ್ಥಿತಿಯತ್ತ ಸಾಗುತ್ತಿವೆ. ನಿಲಯದ ಮೇಲಿದ್ದ ನೀರು ಸಂಗ್ರಹಣೆಯ ಸಿಂಟೆಕ್ಸ್ ಒಡೆದು ಹಾಳಾಗಿ ಬಳಕೆಗೆ ಬಾರದಂತಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ವಸತಿ ನಿಲಯ ಬಂದಾಗಿದೆ.
ಬಾಲಕರ ನಿಲಯವಿಂದು ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ನಿಲಯದ ಮುಂಬಾಗಿಲಿಗೆ ಕೀಲಿ ಜಡಿದು ಮುಚ್ಚಿದ್ದರೂ ಸಹ ಕೆಲವು ಕಿಡಿಗೇಡಿಗಳು ಹಿಂದಿನ ಬಾಗಿಲನ್ನು ಒಡೆದು ತಮ್ಮ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಇಂದು ವಿದ್ಯಾರ್ಥಿಗಳಿಲ್ಲದೆ ಅನಾಥವಾಗಿದೆ.
ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಹಾಳಾಗಬಾರದು. ವಸತಿ ನಿಲಯವನ್ನು ಈವರೆಗೆ ನಿರ್ಲಕ್ಷ್ಯ ಮಾಡಿದ ಪರಿಣಾಮವೇ ಇಂದಿನ ಸ್ಥಿತಿಗೆ ಕಾರಣ. ಆದ್ದರಿಂದ ಸರಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಇನ್ನಾದರೂ ಎಚ್ಚೆತ್ತು ಈ ಕಟ್ಟಡದಲ್ಲಿ ಪುನಃ ವಿದ್ಯಾರ್ಥಿ ನಿಲಯ ಅಥವಾ ಇನ್ನಾವುದೇ ಸರಕಾರಿ ಕಚೇರಿಗಳನ್ನು ಪ್ರಾರಂಭಿಸುವ ಕ್ರಮಕ್ಕೆ ಮುಂದಾಗಬೇಕು. ಇಲ್ಲವೇ ನಿಲಯದ ಹತ್ತಿರವೇ ಇರುವ ಪ್ರೌಢಶಾಲೆ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಕಟ್ಟಡವನ್ನು ಉಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕರ ಪ್ರವೇಶಾತಿ ಕೊರತೆಯಿಂದ ವಸತಿ ನಿಲಯ ಬಂದಾಗಿದೆ. ಕಟ್ಟಡದ ಕುರಿತು ಯಾವುದೇ ಇಲಾಖೆಯಿಂದ ಬೇಡಿಕೆ ಬಂದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಸ್ತಾಂತರಿಸಲಾಗುವುದು.
•
ಮಹೇಶ ಪೋದ್ದಾರ,
ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ
ಕಳೆದ ನಾಲ್ಕು ವರ್ಷಗಳಿಂದ ವಸತಿ ನಿಲಯ ಪಾಳು ಬಿದ್ದಿದೆ. ವಿದ್ಯಾರ್ಥಿಗಳ ಕೊರತೆ ನೆಪದಿಂದ ಸ್ಥಗಿತಗೊಳಿಸಲಾದ ವಸತಿ ನಿಲಯವೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಶೀಘ್ರವೇ ವಸತಿ ನಿಲಯ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಟ್ಟಡ ಬೇರೆ ಕಾರ್ಯಕ್ಕೆ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು.
•ಉಮೇಶ ಬಿರಾದಾರ,
ಕರವೇ ರೈತ ಘಟಕದ ತಾಲೂಕಾಧ್ಯಕ್ಷ, ಮುಳಸಾವಳಗಿ
ಪ್ರವೀಣ ಕುಲಕರ್ಣಿ