ಬೆಂಗಳೂರಿನಲ್ಲಿ ನೆಲೆಸಿರುವ ಮಿತ್ರರು ದೇವರಗುಂಡಿ ಜಲಪಾತದ ಸೊಬಗನ್ನು ಸವಿಯಲು ಹೋಗೋಣ ಎಂದು ನನ್ನನ್ನು ಒತ್ತಾಯಿಸುತ್ತಲೇ ಇದ್ದರು. ನಾನು ಮಾತ್ರ, ಬೇಸಗೆಯಲ್ಲಿ ನೀರಿದ್ದರೂ ಮಳೆಗಾಲದಲ್ಲಿ ಅದರ ಸೊಬಗು ದ್ವಿಗುಣಗೊಳ್ಳುತ್ತದೆ. ಮಳೆ ಚೆನ್ನಾಗಿ ಹಿಡಿಯಲಿ. ಆಮೇಲೆ ದೇವರ ಗುಂಡಿ ನೋಡಲು ಹೋಗೋಣ ಎಂದು ಸಮಾಧಾನಿಸಿದ್ದೆ. ಜುಲೈ ಮೊದಲ ವಾರದಲ್ಲಿ ಕರೆದೊಯ್ಯುವುದಾಗಿ ಮಾತನ್ನೂ ಕೊಟ್ಟಿದ್ದೆ.
ಮಿತ್ರರು ಜೂನ್ ತಿಂಗಳಲ್ಲೇ ವರಾತ ಶುರುವಿಟ್ಟುಕೊಂಡಿದ್ದರು. ಊರಲ್ಲಿ ಮಳೆ ಶುರುವಾಯಿತೋ ಹೇಗೆ ಎಂದು. ಆದರೆ, ಈ ಬಾರಿ ಆರಂಭದಲ್ಲಿ ಮುಂಗಾರು ದುರ್ಬಲವಾಗಿದ್ದರಿಂದ ಸಾಕಷ್ಟು ಮಳೆ ಸುರಿಯಲಿಲ್ಲ. ಹೀಗಾಗಿ, ದೇವರಗುಂಡಿ ಜಲಪಾತವೂ ಮೈದುಂಬಿಕೊಂಡಿರಲಿಲ್ಲ. ತಿಂಗಳ ಕೊನೆಗೆ ಚೆನ್ನಾಗಿ ಮಳೆ ಸುರಿಯಲು ಆರಂಭವಾದ ಕಾರಣ ಭೂಮಿ ತಂಪಾಯಿತು. ಒರತೆಗಳೂ ಉಕ್ಕಲಾರಂಭಿಸಿದವು. ಎರಡು – ಮೂರು ದಿನಗಳ ಹಿಂದೆ ಮಿತ್ರರಿಗೆ ಕರೆ ಮಾಡಿ, ಸುಳ್ಯಕ್ಕೆ ಬರ ಹೇಳಿದೆ. ಸುಳ್ಯದಿಂದ ಬೆಳಗ್ಗೆ 8.45ಕ್ಕೆ ಅವಿನಾಶ್ ಎಂಬ ಹೆಸರಿನ ಖಾಸಗಿ ಬಸ್ಸನ್ನೇರಿದೆವು. ಮಾಣಿ-ಮೈಸೂರು ರಸ್ತೆಯಲ್ಲಿ ಹಸುರು ಸಿರಿಯ ಮಧ್ಯೆ 11 ಕಿ.ಮೀ. ಸಾಗಿದ ಬಸ್ಸು ಅರಂತೋಡು ಪೇಟೆ ದಾಟಿದೊಡನೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದ್ವಾರದ ಮೂಲಕ ತೆರಳಿತು. ಅರಂತೋಡು ತೊಡಿಕಾನ ರಸ್ತೆಯಲ್ಲಿ ಸುಮಾರು 6 ಕಿ.ಮೀ. ಕಳೆದ ಬಳಿಕ 9.30ಕ್ಕೆ ಬಸ್ಸು ತೊಡಿಕಾನ ಸುಳ್ಯ ಸೀಮೆ ಒಡೆಯ ಶ್ರೀ ಮಲ್ಲಿಕಾರ್ಜುನ ದೇವರ ಕ್ಷೇತ್ರವನ್ನು ತಲುಪಿತು.
ಬಸ್ಸಿನಿಂದ ಇಳಿದ ನಾವು ದೇವಸ್ಥಾನಕ್ಕೆ ಭೇಟಿ ನೀಡಿ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ಗಂಧ ಪ್ರಸಾದ ಸ್ವೀಕರಿಸಿ, ಪಡುವಣ ಬಾಗಿಲ ಮೂಲಕ ಹೊರಬಂದೆವು. ದೇವಸ್ಥಾನದ ಪಕ್ಕದಲ್ಲೇ ಇರುವ ಮತ್ಸ್ಯತೀರ್ಥ ಹೊಳೆಯಲ್ಲಿರುವ ದೇವರ ಮೀನುಗಳನ್ನು ನೋಡಲು ಹೊರಟೆವು. ಪಕ್ಕದ ಅಂಗಡಿಯಿಂದ ಮೀನುಗಳಿಗೆ ಹಾಕಲೆಂದು ಒಂದಷ್ಟು ಆಹಾರವನ್ನೂ ಖರೀದಿಸಿದೆವು. ಮೊದಲಿಗೆ ಮೂರು- ನಾಲ್ಕು ಮೀನುಗಳು ಮಾತ್ರ ಗೋಚರಿಸಿದವು. ಆಹಾರ ಹಾಕಲು ಆರಂಭಿಸುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಬಂದು ಚಟಪಟ ಎಂದು ನೀರು ಚಿಮ್ಮಿಸಿದವು. ಅವುಗಳನ್ನು ನೋಡುವುದೇ ಒಂದು ಆನಂದ.ಅಲ್ಲಿಂದ ತೊಡಿಕಾನ-ಪಟ್ಟಿ-ರಸ್ತೆಯಲ್ಲಿ ದೇವರಗುಂಡಿಯತ್ತ ಹೆಜ್ಜೆ ಇಟ್ಟೆವು. ಡಾಮರು ಏರು ರಸ್ತೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ 1.5 ಕಿ.ಮೀ. ಸಾಗಿ, ಬಲಭಾಗದಲ್ಲಿರುವ ಖಾಸಗಿಯವರ ತೋಟದ ಮೂಲಕ ಸುಮಾರು 300 ಮೀ. ನಡೆದು ಹೋಗುವಷ್ಟರಲ್ಲಿ ಜುಳು ಜುಳು ನಿನಾದ ಕಿವಿಗೆ ಬಿತ್ತು. ಇನ್ನಷ್ಟು ಹತ್ತಿರ ಹೋದಾಗ ನೀರು ಭೋರ್ಗರೆಯುವ ಸದ್ದು ಒಂದಿಷ್ಟು ಭಯವನ್ನೂ ಮೂಡಿಸಿತು.
ಸುಮಾರು 50 ಅಡಿ ಎತ್ತರದಿಂದ ನೀರು ಧಾರೆಯಾಗಿ ಧುಮ್ಮಿಕ್ಕುತ್ತಿತ್ತು. ನೀರು ಧುಮುಕುವ ರಭಸಕ್ಕೆ ನಾವು ನಿಂತಲ್ಲಿಗೂ ಹನಿಗಳು ಬಂದು ಬೀಳುತ್ತಿದ್ದವು. ನಾವೆಲ್ಲ ಒದ್ದೆಮುದ್ದೆ ಆಗಿದ್ದರೂ ಅರಿವೇ ಇಲ್ಲದಂತೆ ಜಲಪಾತವನ್ನೇ ನೋಡುತ್ತ ನಿಂತಿದ್ದೆವು. ಪರಿಸರದ ಹಸುರು ವನರಾಶಿ, ಅಡಿಕೆ, ತೆಂಗಿನ ತೋಟಗಳು, ಕೋಗಿಲೆಗಳ ಗಾನ, ದುಂಬಿಗಳ ಝೇಂಕಾರ ನಮ್ಮನ್ನು ಭಾವನಾ ಲೋಕಕ್ಕೆ ಕರೆದೊಯ್ದಿದ್ದವು.
ಕೆಲವು ಮಿತ್ರರು, ಜಲಪಾತಕ್ಕೆ ಮೈಯೊಡ್ಡಿ ಸ್ನಾನ ಮಾಡೋಣವೇ ಎಂದು ಪ್ರಶ್ನಿಸಿದರು. ನನ್ನ ಮೈ ಆ ಚಳಿಯಲ್ಲೂ ಬೆವರಿತು. ಇಲ್ಲಿ ನೀರಿನ ಸುಳಿ ಇದೆ. ಸ್ನಾನ ಮಾಡಿದರೆ ಜೀವಕ್ಕೆ ಅಪಾಯವಿದೆ. ಈ ಹಿಂದೆಯೂ ಹಲವರು ಇಂಥ ಸಾಹಸಕ್ಕೆ ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿ, ಅಲ್ಲಿ ಅಳವಡಿಸಿರುವ ಎಚ್ಚರಿಕೆ ಫಲಕವನ್ನು ತೋರಿಸಿದೆ. ಜಲಪಾತದ ಬಳಿ ಬೇಡ, ಕೆಳಗಡೆ ಹೊಳೆಯಲ್ಲಿ ನೀರಿಗಿಳಿಯಲು ಅನುಕೂಲವಿದೆ. ಅಲ್ಲಿ ಸ್ನಾನ ಮಾಡೋಣ ಎಂದೆ.
ನೀರಿನ ಸಮೀಪ ಫೋಟೋ, ಸೆಲ್ಫಿಗಳನ್ನು ತೆಗೆದುಕೊಂಡು ಸ್ನಾನ ಮಾಡಿದೆವು. ಮತ್ತೂಮ್ಮೆ ಜಲಪಾತದಿಂದ ತುಸು ದೂರ ನಿಂತು ಅದನ್ನು ಕಣ್ತುಂಬಿಕೊಂಡೆವು.
ಅಲ್ಲಿಂದ ಮರಳುವ ದಾರಿಯಲ್ಲಿ ತೊಡಿಕಾನ ದೇವಾಲಯದ ಕಡೆ ಹೆಜ್ಜೆ ಹಾಕಿದೆವು. ಮತ್ತೂಮ್ಮೆ ದೇವರ ದರ್ಶನ ಪಡೆದು, ಪ್ರಸಾದ ಭೋಜನ ಸ್ವೀಕರಿಸಿದೆವು. ನೀರಲ್ಲಿ ಆಟವಾಡಿದ್ದರಿಂದಲೋ ಏನೋ, ತುಂಬ ಹಸಿವಾಗಿತ್ತು. ಊಟವೂ ರುಚಿಕರವಾಗಿತ್ತು.
ದೇವಸ್ಥಾನದ ಗೊಡೆಯಲ್ಲಿ ತೈಲವರ್ಣದಲ್ಲಿ ಬಿಡಿಸಿದ ಸ್ಥಳಪುರಾಣವನ್ನು ನೋಡಿ ಪಾಂಡವರ ಕಾಲದ ಕಿರಾರತಾರ್ಜುನ ಯುದ್ಧ ಇಲ್ಲೇ ನಡೆದಿತ್ತು. ಇದು ಕಣ್ವ ಮುನಿಗಳು ಸ್ಥಾಪಿಸಿದ ಶಿವಲಿಂಗ. ಹಾಗಾಗಿ, ಇದು ಕಾರಣಿಕ ಕ್ಷೇತ್ರವೆಂದು ಹಿರಿಯರು ಹೇಳುತ್ತಿದ್ದ ವಿಷಯಗಳನ್ನು ತಿಳಿಸಿದೆ.
ರೂಟ್ ಮ್ಯಾಪ್
·ಮಂಗಳೂರಿನಿಂದ ಸುಳ್ಯಕ್ಕೆ 86.6 ಕಿ. ಮೀ.
·ಸುಳ್ಯದಿಂದ ಅರಂತೋಡ, ತೋಡಿಕಾನಕ್ಕೆ ಬಸ್ಸಿನ ವ್ಯವಸ್ಥೆಯಿದೆ.
·ತೋಡಿಕಾನದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೂ ಭೇಟಿ ನೀಡಬಹುದು.
· ತೋಡಿಕಾನ-ಪಟ್ಟಿ ರಸ್ತೆಯಲ್ಲಿ ದೇವರಗುಂಡಿ ಜಲಪಾತ ಸಿಗುತ್ತದೆ.
•ತೇಜೇಶ್ವರ್ ಕುಂದಲ್ಪಾಡಿ