ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ನಗರಸಭೆ ವ್ಯಾಪ್ತಿಯಲ್ಲಿ ಓಬಿರಾಯನ ಕಾಲದಲ್ಲಿ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದ ನಿರ್ಮಿಸಿರುವ ಒಳಚರಂಡಿಗಳು ಸ್ಥಳೀಯ ನಾಗರಿಕರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದ್ದು, 31ನೇ ವಾರ್ಡ್‌ನ ದೇವಪ್ಪ ಬಡಾವಣೆಯಲ್ಲಿ ಹೊಳೆಯಂತೆ ಹರಿಯುವ ಕೊಳಚೆ ನೀರಿಗೆ ಈಗ ಸೊಳ್ಳೆಗಳ ಸಾಮ್ರಾಜ್ಯದಿಂದ ರಾತ್ರಿಯಾದರೆ ಜನ ಕಂಗಾಲಾಗುವಂತೆ ಮಾಡಿದೆ.
ನಗರದ ಸೆಂಟ್ ಜೋಸೆಫ್ ಕಾಲೇಜು, ಸರ್.ಎಂ.ವಿಶೇಶ್ವರಯ್ಯ ಸ್ಮಾರಕ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಹಿಂಭಾಗದಲ್ಲಿರುವ 31ನೇ ವಾರ್ಡ್‌ನ ಜನ ಒಳಚರಂಡಿ ಅವ್ಯವಸ್ಥೆಗೆ ರಾತ್ರಿಯಾದರೆ ಅನೈಮರ್ಲದಿಂದ ಕೈ, ಕಾಲು, ದೇಹಕ್ಕೆ ಮುತ್ತಿಕೊಳ್ಳುವ ಸೊಳ್ಳೆಗಳಿಂದ ಹೈರಾಣಾಗುತ್ತಿದ್ದಾರೆ.
ದುರ್ವಾಸನೆ: ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ದೇವಪ್ಪ ಬಡಾವಣೆ ಸುಸಜ್ಜಿತವಾದ ರಸ್ತೆಗಳ ಸಂಪರ್ಕ ಇದ್ದರೂ ಒಳಚರಂಡಿ ಅವ್ಯವಸ್ಥೆಯಿಂದ ಸ್ಥಳೀಯ ನಿವಾಸಿಗಳು ಪಡಬಾರದ ಸಂಕಷ್ಟ ಅನುಭವಿಸುವಂತಾಗಿದೆ. ಬಡಾವಣೆಯಲ್ಲಿ ಅಲ್ಲಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಿಸಿರುವುದರಿಂದ ಆಗಾಗ ಕೊಳಚೆ ನೀರು ಮ್ಯಾನ್‌ಹೋಲ್‌ಗಳ ಮುಚ್ಚಳದಿಂದ ಹೊರ ಬರುತ್ತಿರುವುದರಿಂದ ನಾಗರಿಕರಿಗೆ ದುರ್ವಾಸನೆ ನಿತ್ಯ ನರಕಯಾತನೆ ಆಗಿ ಬಿಟ್ಟಿದೆ. ಆದರೆ ನಗರಸಭೆಯವರು ಸಾರ್ವಜನಿಕರು ದೂರಿದಾಗ ಒಳಚರಂಡಿ ಬ್ಲಾಕ್ ಆಗಿದ್ದರೆ ತೆರವುಗೊಳಿಸಿ ಹೋಗುವುದು ಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಬಡಾವಣೆ ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ. ಕೊಳಚೆ ನೀರು ಹರಿಯುವುದರಿಂದ ಚರಂಡಿಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಇದರಿಂದ ರಾತ್ರಿಯಾದರೆ ಸೊಳ್ಳೆಗಳ ಆರ್ಭಟ ಶುರುವಾಗುತ್ತದೆ. ಮಕ್ಕಳಾದಿಯಾಗಿ ನಾಗರಿಕರು ನೆಮ್ಮದಿ ಯಿಂದ ಮಲಗಲು ಪರದಾಡಬೇಕಿದೆ. ಕನಿಷ್ಟ ನಗರಸಭೆ ಅಧಿಕಾರಿಗಳು ಫಾಗಿಂಗ್ ಸಹ ಮಾಡುವುದಿಲ್ಲ ಎಂದುಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಸ ವಿಲೇವಾರಿ ಅಷ್ಟಕಷ್ಟೆ: ಇತ್ತೀಚೆಗೆ ಕೊಳಚೆ ನೀರಿನಿಂದ ಇನ್ನಿಲ್ಲದ ಸಮಸ್ಯೆಎದುರಿಸುತ್ತಿರುವ ಬಡಾವಣೆ ನಾಗರಿಕರಿಗೆ ಕಳೆದ ನಾಲ್ಕೈದು ತಿಂಗಳಿಂದ ಬಡಾವಣೆಯಲ್ಲಿ ಕಸದ ಸಮಸ್ಯೆ ಶುರುವಾಗಿದೆಯಂತೆ. ಬಡಾವಣೆಯಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಮೊದಲು ಮನೆ ಮನೆಗೆ ಬಂದು ನಗರಸಭೆ ಗಾಡಿಗಳಲ್ಲಿ ಕಸ ಸಂಗ್ರಹಿಸುತ್ತಿದ್ದರು. ಈಗ ವಾರವಾದರೂ ಕಸ ಸಂಗ್ರಹಕ್ಕೆ ಯಾರು ಬರಲ್ಲ. ಕಸವೆಲ್ಲಾ ಚರಂಡಿಗಳಲ್ಲಿ ತುಂಬುತ್ತಿರುವುದರಿಂದ ಮಳೆ ನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ.
ಒಳಚರಂಡಿ ಕೊಳಚೆ ನೀರು ಚರಂಡಿಗಳಿಗೆ ಸೇರಿಕೊಳ್ಳುತ್ತಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಂಜೆಯಾಗುತ್ತಲೇ ನಾಗರಿಕರು ಮನೆಯೊಳಗೆ ಸೇರಿಕೊಂಡರೆ ಮತ್ತೆ ಬೆಳಗ್ಗೆ ಹೊರ ಬರುವಂತಾಗಿದೆ. ಕೆಲವೊಂದು ಕಡೆ ಒಳಚರಂಡಿ ಮ್ಯಾನ್ ಹೋಲ್‌ಗಳನ್ನು ಎತ್ತರಗೊಳಿಸಿ ದಪ್ಪದ ಪೈಪ್ ಗಳನ್ನು ಅಳವಡಿಸಿದರೆ ಸಮಸ್ಯೆ ನಿವಾರಣೆ ಆಗುತ್ತದೆ. ಆದರೆ ನಗರಸಭೆ ಅಧಿಕಾರಿಗಳಿಗೆ ನಾವು ಹೇಳಿ ಹೇಳಿ ಸಾಕಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಲಕ್ಷ್ಮಣ್‌ಸಿಂಗ್.
-ಕಾಗತಿ ನಾಗರಾಜಪ್ಪ