●ಎಸ್ ಮಹೇಶ್
ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಹೋಗುವ ರಸ್ತೆಯು ಮಣ್ಣಿನ ಕೂಡಿದ್ದು, ಮಳೆ ಬಂದರೆ ರಸ್ತೆಯ ಮೇಲೆಲ್ಲಾ ನೀರು ನಿಂತು ಕೆಸರು ಗದ್ದೆಯಂತಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ತೀವ್ರ ಕಷ್ಟವಾಗಿದೆ.
ಮಕ್ಕಳು ದಿನನಿತ್ಯ ಹರಸಾಹಸ ಪಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ದುಸ್ತಿತಿ ಇದೆ.ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಡೆಗೋಡೆ ಇಲ್ಲ:ಶಾಲಾ ರಸ್ತೆಯಲ್ಲಿರುವ ಕೆರೆಗೆ ತಡೆಗೋಡೆ ಇಲ್ಲದಿರುವುದರಿಂದ ಮಕ್ಕಳು ಆಟವಾಡುತ್ತಾ ಕೆರೆಗೆ ಬೀಳುವ ಅಪಾಯವಿದೆ.ಹೀಗಿದ್ದರೂ ಕೆರೆಗೆ ತಡೆಗೋಡೆ ನಿರ್ಮಿಸಿಲ್ಲ.ಅಲ್ಲದೇ ಶಾಲೆಯ ಸುತ್ತಲೂ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು, ರಾತ್ರಿ ಶಾಲೆಯಲ್ಲಿ ಮಲಗುವ ನಾಯಿಗಳು ಶಾಲೆಯ ಆವರಣ ಹಾಗೂ ತರಗತಿ ಕೋಣೆಗಳ ಮುಂದೆ ಗಲೀಜು ಮಾಡುತ್ತಿವೆ. ದುರ್ವಾಸನೆಯಿಂದ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಅಡಚಣೆಯಾಗುತ್ತಿದೆ.
ಗಿಡ ತೆರವುಗೊಳಿಸಿ:ಇದೇ ರಸ್ತೆಯಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಖಾಸಗಿ ಶಾಲೆಗಳೂ ಇವೆ.ಕೂಗಳತೆಯ ದೂರದಲ್ಲಿ ಜಿಲ್ಲಾಡಳಿತ ಭವನವೂ ಇದೆ. ಶಾಲಾ ರಸ್ತೆಯಲ್ಲಿ ಬೆಳೆದಿರುವ ಗಿಡಗಂಟೆ ಯಿಂದಾಗಿ ಹುಳ-ಉಪ್ಪಟೆಗಳು ಶಾಲೆಯ ಆವರಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳು ಶಾಲೆಗೆ ಹೋಗಿ ಬರಲು ಭಯ ಪಡುವಂತಾಗಿದೆ ಎಂದು ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ.
ಫೆನ್ಸಿಂಗ್ ಇಲ್ಲ: ಇನ್ನು ಶಾಲೆಯ ಆವರಣದಲ್ಲಿ ಬೃಹತ ಹೈವೊಲ್ಟೇಜ್ ಪವರ್ ಪ್ಲಾಂಟ್ ಕೂಡ ಇದ್ದು, ಇದರ ಸುತ್ತಲೂ ಫೆನ್ಸಿಂಗ್ ಹಾಕುವಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಬೆಸ್ಕಾಂಗೆ ಮನವಿ ಮಾಡಿದ್ದರು. ಆದರೆ, ಈವರೆಗೂ ಬೆಸ್ಕಂ ಫೆನ್ಸಿಂಗ್ ಹಾಕಿಲ್ಲ. ಕೂಡಲೇ ಪಿಡಬ್ಲೂಡಿ ಇಲಾಖೆ ಹಾಗೂ ಗ್ರಾಪಂ ಶಾಲೆ ರಸ್ತೆಗೆ ಡಾಂಬರೀಕರಣ ಮಾಡಬೇಕು. ಶಾಲೆಯ ಸುತ್ತಮುತ್ತಲಿನ ವಾತಾ ವರಣ ಸ್ವತ್ಛವಾಗಿಡಲು ಆದ್ಯತೆ ನೀಡಬೇಕೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.