Advertisement

ದೇವನಹಳ್ಳಿ ಬೋಂಡಾ ಸ್ಟಾಲ್‌!

08:29 PM Feb 23, 2020 | Sriram |

ಬೋಂಡಾ, ಬಜ್ಜಿ, ಪಕೋಡವನ್ನು ಸಾಮಾನ್ಯವಾಗಿ ಎಲ್ಲಾ ಕಡೆ ಮಾಡ್ತಾರೆ. ಆದ್ರೆ, ಕೆಲವರು ತಿಂಡಿಗೆ ಬಳಸುವ ಪದಾರ್ಥ, ಕೈ ರುಚಿ, ಶುಚಿತ್ವ, ಹೀಗೆ… ಹಲವು ಕಾರಣಗಳಿಂದ ಗ್ರಾಹಕರಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತಾರೆ. ಇಂತಹದ್ದೇ ಬೋಂಡಾ ಅಂಗಡಿಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿದೆ. ಅದಕ್ಕೆ ಯಾವುದೇ ನಾಮಫ‌ಲಕವಿಲ್ಲ. ಬೋಂಡಾದಿಂದಲೇ ಹೆಸರುವಾಸಿಯಾಗಿರುವ ರುದ್ರಪ್ಪ ಈ ಅಂಗಡಿಯ ಮಾಲೀಕರು.

Advertisement

ಆಂಧ್ರ ಪ್ರದೇಶದ ಹಿಂದೂಪುರ ತಾಲೂಕು ಚಿಲಮತ್ತೂರು ಮಂಡಲ್‌ನವರಾದ ರುದ್ರಪ್ಪರ ತಂದೆ, ತಾತ ಕೂಡ ಬೋಂಡಾ ಮಾರಾಟ ಮಾಡುತ್ತಿದ್ದರು. ಮದುವೆ ಆದ ನಂತರ ರುದ್ರಪ್ಪ, 1985ರಲ್ಲಿ ಕೆಲಸ ಹುಡುಕಿಕೊಂಡು ಹೊಸಕೋಟೆಯಲ್ಲಿದ್ದ ತಮ್ಮ ದೊಡ್ಡಪ್ಪನ ಮನೆಗೆ ಬಂದಾಗ, ಆ ದೇವನಹಳ್ಳಿಯಲ್ಲಿನ ಸಿದ್ದೇಶ್ವರ ಹೋಟೆಲ್‌ಗೆ ಇವರನ್ನು ಸೇರಿಸುತ್ತಾರೆ. ನಂತರ ಕೆನರಾ ಹೋಟೆಲ್‌ ಸೇರಿಕೊಂಡು ಅಲ್ಲಿಯೂ ಸ್ವಲ್ಪ ದಿನ ಕೆಲಸ ಮಾಡಿದ ನಂತರ ಆ ಹೋಟೆಲ್‌ ಮುಚ್ಚಿಹೋಗುತ್ತದೆ. ನಿರುದ್ಯೋಗಿ ಆದ ರುದ್ರಪ್ಪಗೆ ಹೋಟೆಲ್‌ನಲ್ಲಿದ್ದಾಗ ರಾಯರು ಕಲಿಸಿದ್ದ ಅಡುಗೆ ಕೆಲಸವನ್ನೇ ಉದ್ಯೋಗ ಮಾಡಿಕೊಂಡು, ಶಾಲಾ ಸಮಾರಂಭ, ಇತರೆ ಶುಭ ಕಾರ್ಯಗಳಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಇದರಿಂದ ಸಂಸಾರ ತೂಗಿಸುವುದು ಕಷ್ಟವಾಗಿ 1988ರಲ್ಲಿ ದೇವನಹಳಿಯಲ್ಲಿನ ಗಾಂಧಿ ಚೌಕದ ಸಮೀಪದಲ್ಲಿ ಬೋಂಡಾ, ಬಜ್ಜಿ, ಪಕೋಡ ಮಾಡಲು ಶುರು ಮಾಡಿದ್ದಾರೆ. ಆಗ ಒಂದು ಬೋಂಡಾದ ಬೆಲೆ 10 ಪೈಸೆ ಇತ್ತು ಎನ್ನುತ್ತಾರೆ ರುದ್ರಪ್ಪ. ಕೆಲ ವರ್ಷಗಳ ನಂತರ ಹೊಸ ಬಸ್‌ ನಿಲ್ದಾಣದ ಸಮೀಪದಲ್ಲಿ ಚಿಕ್ಕದಾಗಿ ಮಳಿಗೆಯೊಂದನ್ನು ಬಾಡಿಗೆಗೆ ಪಡೆದು, 30 ವರ್ಷಗಳಿಂದ ಬೋಂಡ ಮಾರಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಪತ್ನಿ ಸಿದ್ದಗಂಗಮ್ಮ, ಸೊಸೆ ಲತಾ ಸಾಥ್‌ ನೀಡುತ್ತಾರೆ.

ಟೇಸ್ಟ್‌ ಮೇಂಟೆನೆನ್ಸ್‌
ಹೋಟೆಲ್‌ನಲ್ಲಿ ಅಡುಗೆ ಕೆಲಸವನ್ನಷ್ಟೇ ಕಲಿತಿದ್ದ ರುದ್ರಪ್ಪ, ಬೋಂಡಾ, ಬಜ್ಜಿ ಮಾಡೋದನ್ನು ಬೇರೆಯವರಿಂದ ಕಲಿತಿದ್ದಾರೆ. ಬೋಂಡಾ ತಿಂದ ಗ್ರಾಹಕರು ಯಾವಾಗ ರುಚಿಯಾಗಿದೆ ಅಂದ್ರೋ ಅಲ್ಲಿಂದ ಈವರೆಗೂ ಅದೇ ಗುಣಮಟ್ಟದ ಪದಾರ್ಥಗಳನ್ನು, ಬಳಸಲು ಶುರು ಮಾಡಿದ್ರಂತೆ. ಕಡಲೇಹಿಟ್ಟು, ಇತರೆ ಮಸಾಲೆ ಪದಾರ್ಥಗಳನ್ನು, ಅವುಗಳ ದರ ಹೆಚ್ಚಾದ್ರೂ ಮೊದಲಿನಿಂದಲೂ ಒಂದು ಅಂಗಡಿಯಲ್ಲೇ ಖರೀದಿ ಮಾಡ್ತಾ ಇದ್ದೀನಿ ಅನ್ನುತ್ತಾರೆ ರುದ್ರಪ್ಪ.

ಗರಿಗರಿ ರುಚಿರುಚಿ
ಬೇರೆ ಕಡೆ ಬೋಂಡಾ ಸ್ವಲ್ಪ ಮೆದುವಾಗಿರುತ್ತದೆ. ಆದರೆ, ಇವರು ಗರಿಗರಿಯಾಗಿ ಮಾಡುತ್ತಾರೆ. ಇದು ಗ್ರಾಹಕರಿಗೆ ಒಂದು ವಿಶೇಷ ಅನುಭವಕೊಡುತ್ತದೆ. ಸದಾ ಗ್ರಾಹಕರ ಸಂಖ್ಯೆ ನೋಡಿಕೊಂಡು ಬಿಸಿ ಬಿಸಿಯಾದ ಬೋಂಡಾ, ವಡೆ ತಯಾರಿಸಿ ಕೊಡ್ತಾರೆ. ಕೆಲವು ಗ್ರಾಪಕರು 200, 300 ರೂ.ವರೆಗೂ ಬೋಂಡಾ, ವಡೆ ತೆಗೆದುಕೊಂಡು ಹೋಗುತ್ತಾರೆ.

ಕ್ಯಾಪ್ಸಿಕಂ ಬಜ್ಜಿ ವಿಶೇಷ:
ಬೋಂಡಾದ ಜೊತೆಗೆ ಕ್ಯಾಪ್ಸಿಕಂ ಬಜ್ಜಿಯನ್ನು ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ. ಕತ್ತರಿಸದ ಒಂದು ಕ್ಯಾಪ್ಸಿಕಂ ಅನ್ನು ಕಲಿಸಿದ ಕಡ್ಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಲಾಗುತ್ತೆ. ನಂತರ ಅದನ್ನು ನಾಲ್ಕು ಭಾಗ ಮಾಡಿ, ಅದಕ್ಕೆ ಕ್ಯಾರೆಟ್‌, ಈರುಳ್ಳಿ, ಸೌತೆ ಕಾಯಿ, ಟೊಮೆಟೋ ಚುರು, ಚಟ್ನಿ ಹಾಕಿ ಕೊಡ್ತಾರೆ. (2ಕ್ಕೆ 10 ರೂ.).

Advertisement

ಅಂಗಡಿಯಲ್ಲಿ ಸಿಗುವ ತಿಂಡಿ:
ಮಸಾಲೆ ವಡೆ, ಆಲೂಗಡ್ಡೆ ಬೋಂಡಾ, ಸೊಪ್ಪಿನ ಬೋಂಡಾ, ಮೆಣಸಿನ ಕಾಯಿ ಬಜ್ಜಿ, ರವೆ ವಡೆ, ಮದ್ದೂರು ವಡೆ, ಪಕೋಡ, ಹೀರೇಕಾಯಿ ಬಜ್ಜಿ, ಉದ್ದಿನ ವಡೆ, ಹೆಸರುಕಾಳು ಹುಸ್ಲಿ ಹೀಗೆ 12 ತರಹದ ತಿಂಡಿ ಮಾಡಲಾಗುತ್ತೆ. ಜೊತೆಗೆ ಚಟ್ನಿ ಇರುತ್ತೆ. ದರ 10 ರೂ.(ನಾಲ್ಕಕ್ಕೆ).

ಅಂಗಡಿ ವಿಳಾಸ:
ಹೊಸ ಬಸ್‌ ನಿಲ್ದಾಣ ಹಿಂಭಾಗ, ಅಲಹಬಾದ್‌ ಬ್ಯಾಂಕ್‌ ಎದುರು, ದೇವನಹಳ್ಳಿ ಪಟ್ಟಣ.

ಅಂಗಡಿ ಸಮಯ:
ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆ. ಭಾನುವಾರ ರಜೆ

-ಭೋಗೇಶ್‌ ಆರ್‌.ಮೇಲುಕುಂಟೆ/ ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next