Advertisement

ಜನರ ದಾರಿ ತಪ್ಪಿಸಲು ಶಾಸಕರಿಂದ ಪ್ರತಿಭಟನೆ ನಾಟಕ

04:34 PM Nov 09, 2022 | Team Udayavani |

ದೇವನಹಳ್ಳಿ: ಶಾಸಕರ ಅನುದಾನದಲ್ಲಿ ತುರ್ತು ಕೆಲಸ ಮಾಡಿಸಬೇಕು. ಅದರಲ್ಲಿ ರಸ್ತೆ ದುರಸ್ತಿ ಮಾಡಿಸಬಹುದು. ಆದರೆ, ಜನರಿಗೆ ಮಂಕು ಬುದ್ಧಿ ಎರಚಿ ಹೋರಾಟ ಮಾಡುತ್ತಿದ್ದಾರೆ. ನಾಲ್ವರು ಬಾಲಂಗೋಚಿಗಳನ್ನು ಹಿಂದೆ ಹಾಕಿಕೊಂಡು ಪ್ರತಿಭಟನೆ ಮಾಡಿದರೆ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ. 4 ವರ್ಷದಿಂದ ಅಭಿವೃದ್ಧಿ ಮರೆತವರು ಇಂದು ಬೀದಿಗಿಳಿದು ನಾನೊಬ್ಬ ಅಸಮರ್ಥ ಎಂದು ಕೂಗಿ ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ಚಾಟಿ ಬೀಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮೆಲ್ಲರನ್ನೂ ಒಗ್ಗೂಡಿಸಿಕೊಂಡು ಜೊತೆಯಲ್ಲಿಯೇ ವಿಧಾನಸೌಧದಲ್ಲಿ ಮುಖ್ಯ ಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ಬಳಿ ಹೋಗಿ ಮನವಿ ಮಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಅನುದಾನ ಬೇಗನೆ ಬಿಡುಗಡೆಗೊಂಡು ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿತ್ತು. ಆದರೆ, ಶಾಸಕರು ಹಾಗೆ ಮಾಡದೆ, ಏಕ ನಿರ್ಧಾರ ತೆಗೆದುಕೊಂಡು ರಸ್ತೆ ಗುಂಡಿ ಬಿದ್ದ ಜಾಗದಲ್ಲಿ ಪೈರು ನಾಟಿ ಮಾಡುವುದರ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಅನುದಾನ ಬಿಡುಗಡೆ ಆಗಿದೆ: ಚುನಾವಣೆ ಸಮೀಪಿಸುತ್ತಿರುವುದರಿಂದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದಿಂದ ಈಗಾಗಲೇ ಇಡೀ ರಾಜ್ಯಾದ್ಯಂತ ಎಲ್ಲಾ ಶಾಸಕರಿಗೆ ಕ್ಷೇತ್ರಗಳ ಅಭಿವೃದ್ಧಿಗಾಗಿ ಇಂತಿಷ್ಟು ಅನುದಾನ ಬಿಡುಗಡೆಯಾಗಿದೆ. ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಬಿಡುಗಡೆಯಾಗಿಲ್ಲ. ಹಾಗೇ ಕೊಡಲು ಬರುವುದಿಲ್ಲ. ಆ ರೀತಿಯಾಗಿ ಹಣ ಬಿಡುಗಡೆಯಾಗಿರುವುದನ್ನು ಮನಗಂಡು ಇಷ್ಟು ದಿನದಲ್ಲಿ ಮಾಡದ ಹೋರಾಟ ಏಕಾಏಕೀ ಮಾಡಿರುವುದು ಮತ್ತು ಹೋರಾಟ ಮಾಡಿದ್ದರಿಂದ ಅನುದಾನ ಬಂದಿದೆ ಎಂದು ಹೇಳಿಕೊಂಡು ಪಕ್ಷದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಬಿಜೆಪಿ ಶಾಸಕರು ಇಲ್ಲ. ಮೊನ್ನೆ ಜೆಡಿಎಸ್‌ನಿಂದ ಮಾಡಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಗ್ರಾಪಂಗೆ ಒಂದು ರೀತಿಯ ಅನುದಾನ ಬರುವುದಾದರೆ, ಪುರಸಭೆಗೆ ನಗರೋತ್ಥಾನ ಹಣ ಬರಲಿದ್ದು, 15ನೇ ಹಣಕಾಸು ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತದೆ. ಮತ್ತು ಬಯಪ್ಪ ಅನುದಾನವೂ ಸಹ ಇರುತ್ತದೆ ಎಂದರು.

ಶಾಸಕರಿಗೆ ತಿಳಿವಳಿಕೆಯ ಕೊರತೆ: ಹಾಲಿ ಶಾಸಕರು ಅವರ ಅನುದಾನದಲ್ಲಿ 2 ಕೋಟಿ ರೂ. ಪ್ರತಿವರ್ಷ ಮೀಸಲಿರುತ್ತದೆ. 5 ವರ್ಷದಲ್ಲಿ 10 ಕೋಟಿ ರೂ. ಅನುದಾನ ಇರುತ್ತದೆ. ಅದರಲ್ಲಿ ಪ್ರಕೃತಿ ವಿಕೋಪ, ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು. ಆದರೆ, ಕೇವಲ 2 ಕೋಟಿ ರೂ. ಹಣ ಹೈಮಾಸ್ಟ್‌ ದೀಪಕ್ಕೆ ಬಳಸಲಾಗಿದೆ. ಈ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಬಳಸಬಹುತ್ತಿತ್ತು. ತಿಳಿವಳಿಕೆಯ ಕೊರತೆಯಿಂದ ಈ ಹೋರಾಟ ಮಾಡಿರುವುದು ಸರಿಯಾಗಿಲ್ಲ. ಜಿಲ್ಲೆಯಲ್ಲಿ ನಾಲ್ಕು ತಾಲೂಕಿನಲ್ಲಿ ನಮ್ಮ ಪಕ್ಷದ ಶಾಸಕರು ಇಲ್ಲದಿದ್ದರೂ ಅನುದಾನ ಬಿಡುಗಡೆಯಾಗುತ್ತಲೇ ಇದೆ ಎಂದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಮಾತನಾಡಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌ಎಲ್‌ಎನ್‌ ಅಶ್ವತ್ಥ್ನಾರಾಯಣ್‌, ತಾಲೂಕು ಅಧ್ಯಕ್ಷ ಸುಂದರೇಶ್‌, ಪ್ರಧಾನ ಕಾರ್ಯದರ್ಶಿ ನಿಲೇರಿ ಮಂಜುನಾಥ್‌, ರವಿಕುಮಾರ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ತಾಲೂಕು ರೈತ ಮೋರ್ಚಾ ಅಧ್ಯಕ್ಷ ವಿನಯ್‌ ಕುಮಾರ್‌, ದೇವನಹಳ್ಳಿ ಮಹಾ ಶಕ್ತಿ ಕೇಂದ್ರದ ಸಂದೀಪ್‌, ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ, ಲಕ್ಷ್ಮೀ ಅಂಬರೀಶ್‌, ಮುಖಂಡ ದೇ. ಸು.ನಾಗರಾಜ್‌, ಸುಬ್ಬೇಗೌಡ, ಶ್ಯಾನಪ್ಪನಹಳ್ಳಿ ರವಿ, ಅಶೋಕ್‌ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next