ದೇವನಹಳ್ಳಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಇಳಿಮುಖವಾಗುತ್ತಿವೆ. 300-400, 460ರ ತನಕ ಏರಿಕೆಯಾಗಿದ್ದ ಕೋವಿಡ್ ಪ್ರಕರಣಗಳು ಇದೀಗ ಒಂದು ವಾರದಿಂದ 100 ಗಡಿಗೆ ಇಳಿದಿದೆ. ಕೋವಿಡ್ ತಪಾಸಣೆ ತೀವ್ರಗೊಳಿಸಿರುವ ನಡುವೆಯೇ ಸೋಂಕಿತರ ಪ್ರಮಾಣ ಕಡಿಮೆ ಬರುತ್ತಿರುವುದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.
ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ,ಕೋವಿಡ್ ಸೋಂಕಿಗೆ ಸಾವನ್ನಪ್ಪಿರುವ ಸಂಖ್ಯೆಯಲ್ಲಿಯೂ ಕಡಿಮೆ ಇದೆ. ಅಕ್ಟೋಬರ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ, 10 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ 10,76,673 ರಷ್ಟು ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 16,258 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದರಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದ 915 ಜನ ಸೋಂಕಿತರಿದ್ದರು. 12,852 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 3,279 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 83,139 ಜನರಲ್ಲಿ ನೆಗಟಿವ್ ಬಂದಿದೆ. ಇನ್ನೂ 8,276 ಜನರ ಫಲಿತಾಂಶ ಬರಬೇಕಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜನರು ಮಾಸ್ಕ್ ಇಲ್ಲದೆ, ಬೇಕಾಬಿಟ್ಟಿ ಓಡಾಡುವುದು, ಸಭೆ ಸಮಾರಂಭಗಳಲ್ಲಿ ಗುಂಪು ಗುಂಪಾಗಿ ಸಾಮಾಜಿಕ ಅಂತರವಿಲ್ಲದೆ, ನಿಲ್ಲುತ್ತಿರುವುದರಿಂದ ಕೋವಿಡ್ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ, ಸ್ಥಳೀಯ ಪುರಸಭೆ, ನಗರಸಭೆಗಳಲ್ಲಿ ಮಾಸ್ಕ್ ಇಲ್ಲದೆ ಓಡಾಡುವವರಿಗೆ ದಂಡ ವಿಧಿಸಿದರೂ ಜನ ಎಚ್ಚರಿಕೆ ವಹಿಸುತ್ತಿಲ್ಲ.
ಕೋವಿಡ್ ಚೈನ್ ಲಿಂಕ್‌ಗೆ ಬ್ರೇಕ್ ಹಾಕಲು ಕೋವಿಡ್ ತಪಾಸಣೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಲಾಗಿದೆ. ಇದರ ನಡುವೆಯೂ ಕೋವಿಡ್ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿರುವುದು ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮ ನಿರ್ಲಕ್ಷಿಸಬಾರದು.
–ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಕೋವಿಡ್ ಪರೀಕ್ಷೆ ಹೆಚ್ಚಿಸಿದ್ದು, ನೆಗಟಿವ್ ಪ್ರಕರಣಗಳು ಹೆಚ್ಚುಕಂಡುಬರುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದೆ.
–ಡಾ.ಕೆ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ