Advertisement

ಕುಸಿಯುವ ಭೀತಿಯಲ್ಲಿ ದೇವಗಿರಿ ಸರಕಾರಿ ಶಾಲೆ

03:07 AM Jul 09, 2020 | Sriram |

ಮುಂಡಾಜೆ: ಸಾವಿರಾರು ಜನರಿಗೆ ಅಕ್ಷರ ಜ್ಞಾನ ಕಲಿಸಿ ವಿದ್ಯಾವಂತರನ್ನಾಗಿ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದ ಸರಕಾರಿ ಶಾಲೆ ಯೊಂದು ವಿದ್ಯಾರ್ಥಿಗಳ ಕೊರತೆಯಿಂದ 8 ವರ್ಷಗಳ ಹಿಂದೆ ಮುಚ್ಚಲ್ಪಟ್ಟು, ಸದ್ಯ ದಲ್ಲೇ ಧರಾಶಾಯಿಯಾಗುವ ಪರಿಸ್ಥಿತಿಗೆ ತಲುಪಿರುವುದು ಬೇಸರದ ಸಂಗತಿ.

Advertisement

ಇದು ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಥೆ.

2012ರಿಂದ ಮುಚ್ಚಿದೆ
ಈ ಸರಕಾರಿ ಶಾಲೆ ಸುಮಾರು 30 ವರ್ಷಗಳ ಹಿಂದೆ ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾಯಿತು. ಸುಮಾರು 1 ಎಕ್ರೆ ಜಾಗವನ್ನು ಊರವರೊಬ್ಬರು ಶಾಲೆಗಾಗಿ ನೀಡಿದ್ದಾರೆ. ಎಲ್ಲ ವಿಚಾರಗಳಲ್ಲೂ ವ್ಯವಸ್ಥಿತವಾಗಿದ್ದ ಶಾಲೆ 2012ರಲ್ಲಿ ವಿದ್ಯಾರ್ಥಿಗಳ ದಾಖ ಲಾತಿ ಕೊರತೆಯಿಂದ ಮುಚ್ಚಲ್ಪಟ್ಟಿದೆ. ನೆರಿಯ ಗ್ರಾಮದ ದೇವಗಿರಿ, ಅಂಬಟೆಮಲೆ ಮೊದಲಾದ ಪ್ರದೇಶಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಶಾಲೆಯು ಆಸರೆಯಾಗಿತ್ತು. 1ರಿಂದ 7ನೇ ತರಗತಿ ತನಕ ಇದ್ದ ಶಾಲೆಯಲ್ಲಿ ಹಲವು ವರ್ಷ 200ಕ್ಕಿಂತ ಅಧಿಕ ಮಕ್ಕಳ ಹಾಜರಾತಿ ಇರುತ್ತಿತ್ತು. ಆದರೆ ಮುಂದೆ ಮಕ್ಕಳ ದಾಖಲಾತಿ ಕ್ಷೀಣಿಸಿ, 2012ರಿಂದ ಮುಚ್ಚಿಹೋಗಿದೆ. ಆದರೆ ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಶಾಲೆಯನ್ನು ಮತ್ತೆ ತೆರೆಯುವ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದಿರುವುದು ವಿಪರ್ಯಾಸ.

ಶಿಥಿಲಗೊಂಡ ಶಾಲೆ
ಶಾಲಾ ಪರಿಸರದ ಸುತ್ತ ಗಿಡಗಂಟಿ ಬೆಳೆದಿದ್ದು, ಹಾವು ಮೊದಲಾದ ಜೀವಿಗಳಿಗೆ ಆಶ್ರಯತಾಣ. ಶಾಲಾ ಕೊಠಡಿಗಳು ಕಸ ತುಂಬಿ ತ್ಯಾಜ್ಯ ಕೇಂದ್ರಗಳಾಗಿವೆ. ಶೌಚಾಲಯ ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣದಂತಾಗಿದೆ.

ಗ್ರಾಮಸ್ಥರ ಆಕ್ರೋಶ
ನೆರಿಯ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವು ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಿರುವುದು ಈ ಶಾಲೆಯ ದಾಖಲಾತಿ ಕ್ಷೀಣಿಸಲು ಕಾರಣ. ಶಾಲೆಯನ್ನು ಉಳಿಸಿಕೊಳ್ಳಲು ಅಥವಾ ದುರಸ್ತಿ ಬಗ್ಗೆ ಸಂಬಂಧ ಪಟ್ಟವರಿಗೆ ಮನವರಿಕೆ ಮಾಡಿದ್ದರೂ ಪ್ರಯೋಜನ ವಾಗಿಲ್ಲ, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆ ದರೂ ಯಾರ ಗಮನಕ್ಕೂ ಬರುವುದಿಲ್ಲ, ಶಾಲೆ ಈ ಸ್ಥಿತಿ ತಲುಪಿದ್ದರೂ ಯಾವುದೇ ಇಲಾಖೆ ಗಮನ ಹರಿಸಿಲ್ಲ ಎಂದು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

 ಸಮಾಲೋಚಿಸಿ ನಿರ್ಧಾರ
ಕೂಡಲೇ ಶಾಲಾ ಪರಿಸರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಶಾಲೆಯನ್ನು ಪುನರಾರಂಭಿಸುವ ಕುರಿತು ಸಮಾಲೋಚಿಸಲಾಗುವುದು.
-ತಾರಾಕೇಸರಿ
ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

ದುರಸ್ತಿಗೊಳಿಸಿ
ಮುಚ್ಚಿರುವ ನಮ್ಮೂರ ಶಾಲೆಯನ್ನು ದುರಸ್ತಿಗೊಳಿಸಿ, ಅಭಿವೃದ್ಧಿ ಪಡಿಸಿದರೆ ಮಕ್ಕಳ ದಾಖಲಾತಿಗೆ ಕೊರತೆಯಾಗದು.
– ಹರಿಪ್ರಸಾದ್‌, ನೆರಿಯ

Advertisement

Udayavani is now on Telegram. Click here to join our channel and stay updated with the latest news.

Next