ದೇವದುರ್ಗ: ಪಟ್ಟಣದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಬಾಬು ಜಗಜೀವನರಾವ್ ಭವನ ಉದ್ಘಾಟನೆಗೆ ಕಾಯುತ್ತಿದ್ದರೆ, ಅವಧಿ ಮುಗಿದರೂ ಬಂಜಾರ ಭವನ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ.
ಪಟ್ಟಣದ ಹೊರವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರದಲ್ಲಿ ನಿರ್ಮಿಸಲಾದ ಬಾಬು ಜಗಜೀವನರಾವ್ ಸಮುದಾಯ ಭವನದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಕಾಮಗಾರಿ ಪೂರ್ಣವಾಗಿ ಮೂರ್‍ನಾಲ್ಕು ತಿಂಗಳಾದರೂ ಇಲ್ಲಿವರೆಗೆ ಉದ್ಘಾಟನೆ ಮಾಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಮುದಾಯ ಭವನ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಕಿಡಿಗೇಡಿಗಳ ಕಾಟಕ್ಕೆ ಕಟ್ಟಡ ಹಾಳಾಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಗೊಂಡು ಭವನ ಉದ್ಘಾಟಿಸಿ ಕಾರ್ಯಕ್ರಮಗಳಿಗೆ ಅನುಕೂಲು ಮಾಡಬೇಕು ಎಂದು ಸಮುದಾಯವರು ಆಗ್ರಹಿಸಿದ್ದಾರೆ.
ಬಂಜಾರ ಭವನ: ಪಟ್ಟಣದ ಯಲ್ಲಾಲಿಂಗ ಕಾಲೋನಿಯಲ್ಲಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಂಜಾರ ಸಮುದಾಯ ಭವನದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಆರಂಭದಲ್ಲಿ ವೇಗವಾಗಿ ಸಾಗಿದ ಕಾಮಗಾರಿ ದಿನಗಳು ಕಳೆಯುತ್ತಿದ್ದಂತೆ ನಿಧಾನಗತಿಯಲ್ಲಿ ಸಾಗಿದೆ. ಕಳೆದ ಮೂರ್‍ನಾಲ್ಕು ತಿಂಗಳಿಂದ ಕೆಲಸ ನಿಲ್ಲಿಸಲಾಗಿದೆ.
ಟೆಂಡರ್ ನಿಯಮದ ಪ್ರಕಾರ ಈಗಾಗಲೇ ಅವಧಿ ಮುಗಿದಿದೆ. ಆದರೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಹಿಂದೇಟು ಹಾಕಿದ ಕಾರಣಕ್ಕೆ ಭವನದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸ್ಥಳೀಯ ಶಾಸಕ ಕೆ.ಶಿವನಗೌಡ ನಾಯಕ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ ಅಧಿಕಾರಿಗಳು ವಿಳಂಬ ನೀತಿ ತಾಳಿದ ಪರಿಣಾಮ ಬಂಜಾರ ಸಮುದಾಯ ಭವನ ಸಮಾಜದವರಿಗೆ ಅನಾನೂಕೂಲವಾಗಿದೆ.
ಸಣ್ಣಪುಟ್ಟ ಕಾಮಗಾರಿ ಭಾಕಿ ಇದೆ. ಶೌಚಾಲಯ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಿ ಸಮಾಜದವರಿಗೆ ಅನುಕೂಲು ಮಾಡಲಾಗುತ್ತದೆ.
ಬಸವರಾಜ, ಪಿಡಬ್ಲ್ಯೂಡಿ ಜೆಇ
ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಸಂಬಂಧಪಟ್ಟ ಸಿಆರ್‌ಪಿಯಿಂದ ಮಾಹಿತಿ ಪಡೆದು ಪರಿಶೀಲಿಸಿ ಕ್ರಮ ವಹಿಸಲಾಗುವುದು.
ಆರ್. ಇಂದಿರಾ,
ಕ್ಷೇತ್ರ ಶಿಕ್ಷಣಾಧಿಕಾರಿ