ದೇವದುರ್ಗ: ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಅವರು ಇಲ್ಲಿನ ಉಪ ನೋಂದಣಿ, ಸರ್ವೇ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಉಪ ನೋಂದಣಿ, ಸರ್ವೇ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಹಾಯಕ ಆಯುಕ್ತರು, ಕಚೇರಿ ಸಮಯ, ಆಸ್ತಿ ನೊಂದಣಿ, ಓಟಿಪಿ ಸೇರಿ ಇತರೆ ಮಾಹಿತಿಯನ್ನು ಕಚೇರಿ ನಾಮಫಲಕದಲ್ಲಿ ಹಾಕುವಂತೆ ಉಪನೋಂದಣಾಧಿಕಾರಿ ನಿವೇದಿತಾ ಅವರಿಗೆ ಸೂಚಿಸಿದರು.
ಈಗಾಗಲೇ ನಿಮ್ಮ ವಿರುದ್ಧ ಹಲವು ದೂರುಗಳು ಬಂದಿವೆ. ಆದರೆ ಬದಲಾವಣೆ ಆಗದೇ ರೈತರು, ಸಾರ್ವಜನಿಕರು ಕಚೇರಿಗೆ ಅಲೆಯುವಂತಾಗಿದೆ. ಆಗಾಗ ಸರ್ವರ್ ಸಮಸ್ಯೆಯಿಂದ ಕಚೇರಿಗೆ ಬೀಗ ಹಾಕುವುದು, ರೈತರಿಗೆ ಮಾಹಿತಿ ನೀಡದಿರುವುದು, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಕೂಡಲೇ ಸರಿಪಡಿಸದಿದ್ದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಚೇರಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ವಿನಾಕಾರಣ ನೆಪ ಹೇಳಬಾರದು ಎಂದು ತಾಕೀತು ಮಾಡಿದರು.
ಕಚೇರಿಯಲ್ಲಿ ಬಯೋಮೆಟ್ರಿಕ್ ಅಳವಡಿಸಿ ಹಾಜರಾತಿ ಪಾಲನೆ ಮಾಡುವಂತೆ ಸೂಚಿಸಿದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ವಹಿಸಬೇಕು. ರೈತರು ಸಲ್ಲಿಸಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸರ್ವೇ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಎಡಿಆರ್‌ಎಲ್ ಹುದ್ದೆ ಖಾಲಿ ನೆಪದಲ್ಲಿ ಕಡತಗಳು ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ರೈತರು ಕಚೇರಿಗೆ ಅಲೆಯುವಂತಾಗಿದೆ. ನಿಗದಿತ ಅವಧಿಯಲ್ಲೇ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ಅಧಿಕಾರಿಗಳು, ಕಚೇರಿ ಸಿಬ್ಬಂದಿ ಎಚ್ಚರದಿಂದ ಕೆಲಸ, ಕಾರ್ಯ ಮಾಡದಿದ್ದಲ್ಲಿ ಮುಲಾಜಿಲ್ಲದೇ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಚೇರಿ ಒಳಗೆ ಮತ್ತು ಹೊರಗೆ ಧೂಳು ಹೆಚ್ಚಾಗಿದ್ದು, ಸ್ವಚ್ಛತೆಗೆ ಗಮನಹರಿಸಬೇಕು. ರವಿವಾರ ಪರಿಚಾರಕರಿಂದ ಸ್ವಚ್ಛತೆ ಮಾಡಿಸುವಂತೆ ಸೂಚಿಸಿದರು. ಪುನ: ಕಚೇರಿಗೆ ಭೇಟಿ ನೀಡಿದಾಗ ಬದಲಾವಣೆ ಕಾಣಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ ನಿಗಾ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಬಳಿಕ ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಕೆಲ ಸರಕಾರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ತಹಶೀಲ್ದಾರ್ ಮಧುರಾಜ್ ಸೇರಿ ಅಧಿಕಾರಿಗಳು ಇದ್ದರು.