Advertisement

ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

03:19 PM May 20, 2019 | Naveen |

ದೇವದುರ್ಗ: ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ನೀಲವಂಜಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಜನ-ವಾಹನಗಳ ಸಂಚಾರ ದುಸ್ತರವಾಗಿದೆ. ರಸ್ತೆ ಸರಿ ಇಲ್ಲದ್ದರಿಂದ ಸಾರಿಗೆ ಸಂಸ್ಥೆ ಬಸ್‌ ಕೂಡ ಗ್ರಾಮಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ತಾಲೂಕಿನ ಕರಿಗುಡ್ಡ ಗ್ರಾಪಂ ವ್ಯಾಪ್ತಿಯ ನೀಲವಂಜಿ ಗ್ರಾಮದಲ್ಲಿ ಸುಮಾರು 1400 ಜನಸಂಖ್ಯೆ ಇದೆ. ರಾಜ್ಯ ಹೆದ್ದಾರಿ ಕ್ರಾಸ್‌ನಿಂದ ಮೂರು ಕಿ.ಮೀ. ಅಂತರದಲ್ಲಿ ನಿಲವಂಜಿ ಗ್ರಾಮವಿದೆ. ಈ ಮೂರು ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ತಗ್ಗುಗಳು ಬಿದ್ದಿದ್ದು, ಅಲ್ಲಲ್ಲಿ ಜಲ್ಲಿಕಲ್ಲುಗಳು ಎದ್ದಿವೆ. ಈ ಮಾರ್ಗದಲ್ಲಿ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ನಿರಂತರ ಮರಳು ಸಾಗಿಸುತ್ತಿರುವುದರಿಂದ ರಸ್ತೆ ಹಾಳಾಗಿದೆ. ಹಾಳಾದ ರಸ್ತೆಯಲ್ಲಿ ವಾಹನಗಳಿರಲಿ, ಜನ ನಡೆದಾಡುವುದೇ ದುಸ್ತರವಾಗಿದೆ. ಧೂಳಿನ ಕಾಟಕ್ಕೆ ಗ್ರಾಮಸ್ಥರು ಬೇಸತ್ತಿದ್ದಾರೆ. ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಒಂದೇ ಬಾರಿ ಬಸ್‌: ನಿಲವಂಜಿ ಗ್ರಾಮಕ್ಕೆ ನಿತ್ಯ ಬೆಳಗ್ಗೆ ಒಂದು ಬಾರಿ ಮಾತ್ರ ಸಾರಿಗೆ ಸಂಸ್ಥೆ ಬಸ್‌ ಬರುತ್ತದೆ. ನಂತರ ಇತ್ತಕಡೆ ಯಾವುದೇ ಬಸ್‌ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಬಸ್‌ ಸೌಲಭ್ಯಕ್ಕಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಮೂರು ಕಿ.ಮೀ. ನಡೆದುಕೊಂಡು, ಇಲ್ಲವೇ ಇಲ್ಲವೇ ಉಸುಕು ಸಾಗಿಸುವ ಟ್ರ್ಯಾಕ್ಟರ್‌ಗಳಲ್ಲಿ ರಾಜ್ಯ ಹೆದ್ದಾರಿಗೆ ಬರಬೇಕು. ಇನ್ನು ಗ್ರಾಮಕ್ಕೆ ಟಂಟಂ ರಿಕ್ಷಾ ಕೂಡ ಬರುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಸಾರಿಗೆ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.

ಕುಡಿವ ನೀರಿಗೆ ಅಲೆದಾಟ: ನೀಲವಂಜಿ ಗ್ರಾಮದ ಹೊರವಲಯದಲ್ಲಿ ಕೃಷ್ಣಾ ನದಿ ಇದ್ದರೂ ಗ್ರಾಮದಲ್ಲಿ ನೀರಿನ ಬವಣೆ ತಪ್ಪಿಲ್ಲ. ನೀರಿಗಾಗಿ ಜನರು ಕೊಡ ಹಿಡಿದುಕೊಂಡು ಅಲೆದಾಡುವಂತಾಗಿದೆ. ನೀರು ಪೂರೈಕೆಗಾಗಿ ಮೂರು ಟ್ಯಾಂಕ್‌ ನಿರ್ಮಿಸಲಾಗಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮಳೆ-ಬೆಳೆ ವೈಫಲ್ಯದಿಂದ ಜಾನುವಾರುಗಳಿಗೆ ಮೇವಿನ ಅಭಾವ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಮುಂದಾಗಬೇಕು. ಸಮರ್ಪಕ ಬಸ್‌ ಸೌಕರ್ಯ ಕಲ್ಪಿಸಬೇಕು. ನೀರಿನ ಸಮಸ್ಯೆ ಪರಿಹರಿಸುವ ಜೊತೆಗೆ ಜಾನುವಾರುಗಳಿಗೆ ಮೇವು ಒದಗಿಸಲು ಮುಂದಾಗಬೇಕೆಂದು ಗ್ರಾಮಸ್ಥರಾದ ನರಸಣ್ಣ, ಶಿವಪ್ಪ ಆಗ್ರಹಿಸಿದ್ದಾರೆ.

ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮ ಮರಳು ಸಾಗಣೆಯಿಂದಾಗಿ ರಸ್ತೆ ತೀರ ಹದಗೆಟ್ಟು ಹೋಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ.ಸಮರ್ಪಕ ಬಸ್‌ ಸೌಕರ್ಯ ಇಲ್ಲದ್ದಕ್ಕೆ ಗ್ರಾಮಸ್ಥರು ನಡೆದುಕೊಂಡೇ ಹೆದ್ದಾರಿ ಕ್ರಾಸ್‌ವರೆಗೆ ಬರಬೇಕಿದೆ.
ಭೀಮರಾಯ ಜರದಬಂಡಿ
ಪ್ರಗತಿಪರ ಚಿಂತಕ

Advertisement

ನೀಲವಂಜಿ ಗ್ರಾಮಕ್ಕೆ ಎರಡು ಬಾರಿ ಬಸ್‌ ಸಂಚರಿಸುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಶಾಲಾ-ಕಾಲೇಜುಗಳ ಸಮಯಕ್ಕೆ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ.
•ಹಸನ್‌ಅಲಿ,
ಸಾರಿಗೆ ವ್ಯವಸ್ಥಾಪಕರು

Advertisement

Udayavani is now on Telegram. Click here to join our channel and stay updated with the latest news.

Next