Advertisement

ಸಿಡಿಪಿಒ ಕಚೇರಿಯಲ್ಲಿ ಹುದ್ದೆ ಖಾಲಿ

11:18 AM Jul 12, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ:
ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಿಡಿಪಿಒ ಸೇರಿ ವಿವಿಧ ಹುದ್ದೆಗಳು ಖಾಲಿ ಇರುವುದರಿಂದ ಕಡತಗಳ ವಿಲೇವಾರಿ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ಪಾವತಿ ಸರಿಯಾಗಿ ಆಗುತ್ತಿಲ್ಲ ಮತ್ತು ಅಂಗನವಾಡಿಗಳಲ್ಲಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಿಡಿಪಿಒ ಹುದ್ದೆ ಖಾಲಿ ಇದ್ದು, ಪ್ರಭಾರಿ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಶಿಶು ಅಭಿವೃದ್ಧಿ ಸಹಾಯಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಮೇಲ್ವಿಚಾರಕರ ಹುದ್ದೆಗಳು ಖಾಲಿ ಇವೆ.

20 ಮೇಲ್ವಿಚಾರಕರ ಹುದ್ದೆ ಖಾಲಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ 20 ಮೇಲ್ವಿಚಾರಕಿಯರ ಹುದ್ದೆ ಮಂಜೂರಾಗಿವೆ. 13 ಹುದ್ದೆಗಳು ಮಾತ್ರ ಭರ್ತಿ ಇವೆ. ನಾಲ್ವರು ಮೇಲ್ವಿಚಾರಕರು ಎರಡು ವರ್ಷದಿಂದ ಎರವಲು ಸೇವೆಗೆ ಹೋದವರು ಮರಳಿ ಮೂಲ ಕಚೇರಿಗೆ ಬಂದಿಲ್ಲ. ಹೀಗಾಗಿ ಒಬ್ಬ ಮೇಲ್ವಿಚಾರಕರು ಎರಡ್ಮೂರು ವಲಯಗಳ ನೋಡಿಕೊಳ್ಳಬೇಕಿದೆ. ದೇವದುರ್ಗ ಎ, ಬಿ ವಲಯ, ಅರಕೇರಾ ಎ, ಬಿ, ಸಿ ವಲಯಗಳು, ಜಾಲಹಳ್ಳಿ ಎ, ಬಿ, ಸಿ ವಲಯಗಳು, ಗಲಗ ಎ, ಬಿ, ಹಿರೇಬೂದೂರು, ರಾಮದುರ್ಗ, ಕೊಪ್ಪರ ಸೇರಿ 18 ವಲಯಗಳನ್ನು 9 ಜನ ಮೇಲ್ವಿಚಾರಕರೇ ನೋಡಿಕೊಳ್ಳುತ್ತಿದ್ದಾರೆ.

ಪರಿಚಾರಕರೇ ಅಧಿಕಾರಿಗಳು: ಪಟ್ಟಣ ಸೇರಿ ತಾಲೂಕಿನಾದ್ಯಂತ 475 ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿಗಳಲ್ಲಿನ ಅವ್ಯವಹಾರ, ಸಮಸ್ಯೆ ಕುರಿತು ತಾಲೂಕಿನ ಜನತೆ ದೂರು ಸಲ್ಲಿಸಲು ಕಚೇರಿಗೆ ತೆರಳಿದಾಗ ಅಧಿಕಾರಿಗಳು ಇಲ್ಲದಿದ್ದರೆ ಪರಿಚಾರಕರೇ ದೂರು ಸ್ವೀಕರಿಸುತ್ತಾರೆ. ಕಚೇರಿಯಲ್ಲಿ ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ಅಗತ್ಯವಿದೆ. ಸಿಬ್ಬಂದಿ ಇಲ್ಲದ್ದರಿಂದ ಕಡತಗಳ ವಿಲೇವಾರಿ ಆಗುತ್ತಿಲ್ಲ. ಅಂಗನವಾಡಿಗಳಲ್ಲಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಕಾರ್ಯಕರ್ತೆಯರು, ಸಹಾಯಕಿಯರ ವೇತನ ಸಕಾಲಕ್ಕೆ ಆಗುತ್ತಿಲ್ಲ ಎಂದು ಕಾರ್ಯಕರ್ತೆ ರಂಗಮ್ಮ ಆರೋಪಿಸಿದರು.

ಬಯೋಮೆಟ್ರಿಕ್‌ ಇಲ್ಲ: ಸರಕಾರ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್‌ ಅಳವಡಿಸುವಂತೆ ಆದೇಶಿಸಿದೆ. ಆದರೆ ಸಿಡಿಪಿಒ ಕಚೇರಿಯಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಇಲ್ಲ.

Advertisement

ಕುಡಿಯುವ ನೀರಿಲ್ಲ: ವಿವಿಧ ಕೆಲಸ ಕಾರ್ಯದ ನಿಮಿತ್ತ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದ ಅಂಗನವಾಡಿಗಳ ನೂರಾರು ಕಾರ್ಯಕರ್ತೆಯರು ನಿತ್ಯ ಕಚೇರಿಗೆ ಆಗಮಿಸುತ್ತಾರೆ. ಆದರೆ ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ. ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ, ಕಾಯಂ ಸಿಡಿಪಿಒ ನೇಮಕಕ್ಕೆ ಶಾಸಕರು, ಇಲಾಖೆ ಮೇಲಾಧಿಕಾರಿಗಳು ಕ್ರಮ ವಹಿಸಬೇಕೆಂದು ಂದು ಸಿಐಟಿಯು ಮುಖಂಡರಾದ ರಂಗಮ್ಮ ಆನ್ವರಿ ಆಗ್ರಹಿಸಿದರು.

ಸಿಡಿಪಿಒ ಕಚೇರಿಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಅಂಗನವಾಡಿ ಕೇಂದ್ರಗಳ ಮತ್ತು ಕಚೇರಿ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ. ಸಮಸ್ಯೆ ಕುರಿತು ಶಾಸಕ ಕೆ.ಶಿವನಗೌಡ ನಾಯಕ ಗಮನಹರಿಸಬೇಕಿದೆ.
•ಗಿರಿಯಪ್ಪ ಪೂಜಾರಿ,
ಜಾಲಹಳ್ಳಿ, ಸಿಐಟಿಯು ಕಾರ್ಯದರ್ಶಿ

ಸಿಡಿಪಿಒ ಕಚೇರಿಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಕೆಲಸ ಕಾರ್ಯಗಳಿಗೆ ಸ್ವಲ್ಪ ಸಮಸ್ಯೆಯಾಗಿದೆ. ಇಲ್ಲಿನ ಸಮಸ್ಯೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಹುದ್ದೆ ಭರ್ತಿಯಾದರೆ ಕೆಲಸಗಳು ಚುರುಕಾಗಿ ನಡೆಯುತ್ತವೆ.
ಬಿ.ಎಸ್‌. ಹೊಸಮನಿ,
ಪ್ರಭಾರಿ ಸಿಡಿಪಿಒ

Advertisement

Udayavani is now on Telegram. Click here to join our channel and stay updated with the latest news.

Next