ದೇವದುರ್ಗ: ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪೇದೆಗಳು, ಮುಖ್ಯ ಪೇದೆ, ಎಎಸ್‌ಐ ಸೇರಿ ಬಹುತೇಕ ಹುದ್ದೆ ಖಾಲಿ ಇರುವುದರಿಂದ ಪಟ್ಟಣದಲ್ಲಿ ಸಂಚಾರ ನಿಯಂತ್ರಣಕ್ಕೆ ಇರುವ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ದೇವದುರ್ಗ ಸಂಚಾರ ಪೊಲೀಸ್ ಠಾಣೆಯಲ್ಲಿ ಬಹುತೇಕ ಹುದ್ದೆ ಖಾಲಿ ಇವೆ. ಎರಡು ಪಿಎಸ್‌ಐ ಹುದ್ದೆ ಖಾಲಿ ಇವೆ. 4 ಎಎಸ್‌ಐ ಹುದ್ದೆಗಳಿದ್ದು, ಅದರಲ್ಲಿ ಇಬ್ಬರನ್ನು ಭರ್ತಿ ಮಾಡಿದ್ದರೂ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಎರವಲು ಸೇವೆ ಮೇಲೆ ಹೋಗಿದ್ದಾರೆ. 26 ಜನ ಪೇದೆಗಳಲ್ಲಿ 5 ಜನ ಇದ್ದಾರೆ. 12 ಮುಖ್ಯ ಪೇದೆ ಹುದ್ದೆಯಲ್ಲಿ 4 ಜನ ಇದ್ದಾರೆ. ಇಬ್ಬರು ಪಿಎಸ್‌ಐ, ನಾಲ್ಕು ಜನ ಎಎಸ್‌ಐ, 25 ಜನ ಪೊಲೀಸ್ ಹುದ್ದೆಗಳು ಖಾಲಿ ಇರುವುದರಿಂದ ಸಂಚಾರಿ ಠಾಣೆ ಬಿಕೋ ಎನ್ನುತ್ತಿದೆ. ಪಿಎಸ್‌ಐ ಹುದ್ದೆ ಖಾಲಿ ಇರುವುದರಿಂದ ಕಚೇರಿ ನಿರ್ವಹಣೆಗೂ ತೊಂದರೆ ಆಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಲ್ಲಿನ ಸಮಸ್ಯೆ ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಮುಂದಾಗಿಲ್ಲ.
ಟ್ರಾಫಿಕ್ ಸಮಸ್ಯೆ: ಪಟ್ಟಣದಲ್ಲಿ ದಿನೇದಿನೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಸಂಚಾರಿ ಠಾಣೆ ಪೊಲೀಸರ ಕೊರತೆ ಎದುರಾಗಿದೆ. ಕಚೇರಿಯಲ್ಲಿ ಇರುವ ಆರೇಳು ಜನ ಸಿಬ್ಬಂದಿಗಳಲ್ಲಿ, ಸಭೆ, ಸಮಾರಂಭ, ಜಾತ್ರೆ, ಹೋರಾಟ ಹೀಗೆ ಒಂದಿಲ್ಲೊಂದು ಭದ್ರತೆಗೆ ತೆರಳುತ್ತಾರೆ. ಹೀಗಾಗಿ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ ಕಾಡುತ್ತಿದೆ.
ಠಾಣೆಗೆ ಬೀಗ: ಇಲ್ಲಿನ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಮೈಸೂರು ದಸರಾ, ರಾಜಕೀಯ ಸಮಾವೇಶ ಇತರೆ ಕಾರ್ಯಕ್ಕೆ ಭದ್ರತೆಗೆ ನಿಯೋಜನೆ ಮಾಡಿದಾಗ ಸಿಬ್ಬಂದಿ ಇಲ್ಲದೇ ಠಾಣೆಗೆ ಬೀಗ ಹಾಕುವುದು ಸಾಮಾನ್ಯವಾಗಿದೆ.
ಅಡ್ಡಾದಿಡ್ಡಿ ವಾಹನ ನಿಲುಗಡೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅಂಬೇಡ್ಕರ್ ವೃತ್ತ, ಬ್ಯಾಂಕ್, ಹೊಟೇಲ್ಗಳ ಎದುರು ಅಡ್ಡಾದಿಡ್ಡಿ ಬೈಕ್ ನಿಲ್ಲಿಸಲಾಗುತ್ತಿದೆ. ಇದರಿಂದ ಪಾದಚಾರಿಗಳು, ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಇದಲ್ಲದೇ ನಿಯಮ ಮೀರಿ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವುದು, ಒಂದು ಬೈಕ್‌ನಲ್ಲಿ ಮೂವರು ಸಂಚರಿಸುವುದು, ಖಾಸಗಿ ವಾಹನಗಳಲ್ಲಿ ನಿಯಮ ಮೀರಿ ಜನರನ್ನು ಹತ್ತಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇಲ್ಲಿನ ಸಮಸ್ಯೆ ಕುರಿತು ಸಾರ್ವಜನಿಕರು ಮೌಖೀಕವಾಗಿ ಠಾಣೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಕಾಣದಾಗಿದೆ. ಕೂಡಲೇ ಸಂಚಾರಿ ಠಾಣೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕೆಂದು ದಲಿತ ಮುಖಂಡ ಶಾಂತಕುಮಾರ ಆಗ್ರಹಿಸಿದ್ದಾರೆ.