Advertisement

ತಂಬಾಕು ಆರೋಗ್ಯಕ್ಕೆ ಮಾರಕ

01:17 PM Dec 26, 2019 | Naveen |

ದೇವದುರ್ಗ: ಯುವಜನತೆ ಫ್ಯಾಷನ್‌ಗಾಗಿ ಮಾಡುವ ತಂಬಾಕು ಸೇವನೆ, ಸಿಗರೇಟ್‌, ಮದ್ಯಪಾನ, ಗುಟ್ಕಾ ಸೇವನೆಯಂತಹ ದುಶ್ಚಟಗಳಿಂದ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಯುವಕರು ದುಶ್ಚಟದಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಹಶೀಲ್ದಾರ್‌ ಮಂಜುನಾಥ ಭೋಗಾವತಿ ಕಳವಳ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಇವುಗಳ ಸಂಯುಕ್ತಾಶ್ರಯಲ್ಲಿ ಇತ್ತೀಚೆಗೆ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಗುಲಾಬಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಶಾಲಾ-ಕಾಲೇಜಿನಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಿದೆ. ಶಾಲಾ-ಕಾಲೇಜಿನ ವ್ಯಾಪ್ತಿಯ 100 ಮೀಟರ್‌ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಬಾರದು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವಂತಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾ ಧಿಕಾರಿ ಡಾ| ಎಸ್‌. ಎಂ. ಹತ್ತಿ ಮಾತನಾಡಿ, ಸದೃಢ ಸಮಾಜ ನಿರ್ಮಾಣಕ್ಕಾಗಿ ಯುವಕರು ದುಶ್ಚಟದಿಂದ ದೂರವಿರಬೇಕು. ಕ್ಯಾನ್ಸರ್‌, ಹೃದಯ ಸಂಬಂಧಿ, ಶ್ವಾಸಕೋಶದ ಕಾಯಿಲೆಗೆ ತಂಬಾಕು ಉತ್ಪನ್ನ ಸೇವನೆ ಪ್ರಮುಖ ಕಾರಣವಾಗಿದೆ. ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತಿ ವರ್ಷ 60 ಲಕ್ಷಕ್ಕಿಂತ ಹೆಚ್ಚು ಜನ ಮೃತರಾಗುತ್ತಿದ್ದಾರೆ ಎಂದರು.

ಜಾಗೃತಿ ಜಾಥಾ: ತಂಬಾಕು ನಿಯಂತ್ರಣ ಗುಲಾಬಿ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಬಿಇಒ ಚಾಲನೆ ನೀಡಿದರು. ಶಾಲಾ ಆವರಣದಿಂದ ಪ್ರಮುಖ ಬೀದಿಯಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಘೋಷಣೆ ಕೂಗಿದರು. ಬಸ್‌ ನಿಲ್ದಾಣದ ಬಳಿ ಇರುವ ಬಹುತೇಕ ಅಂಗಡಿ ಮಾಲೀಕರಿಗೆ ಗುಲಾಬಿ ಹೂವು ನೀಡಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಜಾಗೃತಿ ಮೂಡಿಸಲಾಯಿತು. ಶಿಕ್ಷಣ ಸಂಯೋಜಕ ಶ್ರೀನಿವಾಸ, ಬಿಆರ್‌ಪಿ ರಂಗಣ್ಣ ಪಾಟೀಲ ಕಮತಗಿ, ರಮೇಶ ಟಿ.ದಾಸರ, ನಿವೃತ್ತ ಶಿಕ್ಷಕ ಶರಣಯ್ಯಸ್ವಾಮಿ, ವೈದ್ಯರಾದ ಶ್ರೀದೇವಿ, ಅಫ್ತಾಸನ್‌, ಸಿಆರ್‌ಪಿ ಬಾಬು ಹಡಗಲಿ, ದಾಕ್ಷಾಯಿಣಿ ಬಸವರಾಜ, ಮುಖ್ಯಶಿಕ್ಷಕ ಶರಣಗೌಡ, ಶಿಕ್ಷಕ ಬಸವರಾಜ ಆರೋಗ್ಯ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next