Advertisement

ಡಿಸಿ ಆದೇಶಕ್ಕೂ ಬೆಲೆ ನೀಡದ ಅಧಿಕಾರಿಗಳು

12:26 PM Oct 25, 2019 | Naveen |

„ನಾಗರಾಜ ತೇಲ್ಕರ್‌
ದೇವದುರ್ಗ:
ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸದೇ ಬೇರೆ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ್ದರಿಂದ ಸಾರ್ವಜನಿಕರು ಸಣ್ಣಪುಟ್ಟ ಕೆಲಸ-ಕಾರ್ಯಗಳಿಗೂ ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

Advertisement

ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳ ಹುದ್ದೆ ಖಾಲಿ ಇದ್ದು, ಪ್ರಭಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಕೇಂದ್ರ ಸ್ಥಾನದಲ್ಲಿ ನೆಲೆಸುತ್ತಿಲ್ಲ. ಇತ್ತೀಚೆಗೆ ಡಾನ್‌ ಬಾಸ್ಕೋ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಉಪ ನೋಂದಣಾಧಿಕಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಜನರ ಸಮಸ್ಯೆಗೆ ಸ್ಪಂದಿಸುವಂತೆ ಮತ್ತು ಕಚೇರಿ ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು.

ಆದರೆ ಬಹುತೇಕ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡದೇ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ.

ವಾರದಲ್ಲಿ ಮೂರೇ ದಿನ ಅಧಿಕಾರಿ ಹಾಜರು: ಇಲ್ಲಿನ ತೋಟಗಾರಿಕೆ, ವಲಯ ಸಾಮಾಜಿಕ ಅರಣ್ಯ, ಉಪ ಖಜಾನೆ, ಸಮಾಜ ಕಲ್ಯಾಣ, ಸರ್ವೇ ಇಲಾಖೆ ಸೇರಿ ಇತರೆ ಇಲಾಖೆ ಅಧಿಕಾರಿಗಳು ವಾರದಲ್ಲಿ ಮೂರು ದಿನ ಕಚೇರಿಗೆ ಆಗಮಿಸುತ್ತಾರೆ. ಹೀಗಾಗಿ ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಕೆಲಸ ಕಾರ್ಯಗಳು ಆಗುತ್ತಿಲ್ಲ. ಪಿಡಬ್ಲ್ಯೂಡಿ, ಉಪ ನೋಂದಣಿ, ಪುರಸಭೆ, ಎಪಿಎಂಸಿ ಸೇರಿ ಇತರೆ ಇಲಾಖೆ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ವಾಸಿಸುವುದಿಲ್ಲ.

ನೆರೆಯ ತಾಲೂಕು ಮತ್ತು ಜಿಲ್ಲಾ ಕೇಂದ್ರದಿಂದ ಆಗಮಿಸುವುದರಿಂದ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ. ಜನಸಾಮಾನ್ಯರು ಅಧಿಕಾರಿಗಳು ಇದ್ದಾರೆಯೇ ಎಂದು ಫೋನ್‌ ಮಾಡಿ ಕೇಳಿ ಬರುವಂತಾಗಿದೆ.

Advertisement

ಪ್ರಭಾರಿಗಳ ಕಾರುಬಾರು: ತೋಟಗಾರಿಕೆ, ಸಿಡಿಪಿಒ, ವಲಯ ಸಾಮಾಜಿಕ ಅರಣ್ಯ, ಉಪ ಖಜಾನೆ, ಸಮಾಜ ಕಲ್ಯಾಣ ಇಲಾಖೆ ಸೇರಿ ಇತರೆ ಇಲಾಖೆಗಳಲ್ಲಿ ಪ್ರಭಾರಿ ಅಧಿ ಕಾರಿಗಳದ್ದೇ ಕಾರುಬಾರು ಎಂಬಂತಾಗಿದೆ. ನಿತ್ಯ ಕಚೇರಿಗೆ ಬಂದು ಕಡತಗಳು ವಿಲೇವಾರಿ ಮಾಡದೇ ವಾರದಲ್ಲಿ ಎರಡ್ಮೂರು ಬಾರಿ ಕಚೇರಿಗೆ ಬರುವುದರಿಂದ ಸಿಬ್ಬಂದಿಗಳೇ ಅಧಿಕಾರಿಗಳ ನಡೆಯಿಂದ ಬೇಸತ್ತಿದ್ದಾರೆ.

ಬಯೋಮೆಟ್ರಕ್‌ ಇಲ್ಲ: ಸರಕಾರ ಸರ್ಕಾರಿ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್‌ ಪದ್ಧತಿ ಅಳವಡಿಸಬೇಕು ಎಂದು ಆದೇಶಿಸಿದೆ. ಆದರೆ ಬಹುತೇಕ ಇಲಾಖೆ ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಿಲ್ಲ. ಹೀಗಾಗಿ ಅಧಿಕಾರಿಗಳು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸುತ್ತಿಲ್ಲ ಎನ್ನಲಾಗಿದೆ. ತೋಟಗಾರಿಕೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ, ಉಪನೋಂದಣಿ, ಉಪಖಜಾನೆ, ಪುರಸಭೆ, ಕೃಷಿ ಇಲಾಖೆ, ಸರ್ವೇ ಆಫೀಸ್‌, ಪಿಡಬ್ಲ್ಯೂಡಿ ಸೇರಿ ಇತರೆ ಇಲಾಖೆಯಲ್ಲಿ ಬಯೋಮೆಟ್ರಿಕ್‌ ಅಳವಡಿಸಿಲ್ಲ. ಕೆಲ ಸರಕಾರಿ ಕಚೇರಿಯಲ್ಲಿ ಬಯೋಮೆಟ್ರಕ್‌ ಸೌಲಭ್ಯವಿದ್ದರೂ ಸಿಬ್ಬಂದಿ ಬಳಸುತ್ತಿಲ್ಲ ಎನ್ನಲಾಗಿದೆ.

ಕ್ರಮಕ್ಕೆ ಆಗ್ರಹ: ತಾಲೂಕು ಮಟ್ಟದ ಅಧಿಕಾರಿಗಳು ಕಚೇರಿ ಸಮಯ ಪಾಲನೆ ಮಾಡುತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ನೆಲೆಸುತ್ತಿಲ್ಲ. ಈ ಕುರಿತು ಎರಡ್ಮೂರು ಬಾರಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮಯ ಪಾಲನೆ ಮಾಡದ, ತಾಲೂಕು ಕೇಂದ್ರದಲ್ಲಿರದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಗೋಪಳಾಪುರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next