ದೇವದುರ್ಗ: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿನ ಆಧಾರ್ ನೋಂದಣಿ ಕೇಂದ್ರದಲ್ಲಿ ಕಳೆದ ಎರಡು ದಿನಗಳಿಂದ ನೆಟ್ವರ್ಕ್ ಸಮಸ್ಯೆಯಿಂದಾಗಿ ಜನ ಪರದಾಡುವಂತಾಗಿದೆ.
ಆಧಾರ್ ನೋಂದಣಿ, ತಿದ್ದುಪಡಿಗೆ ಒಂದೇ ಕೌಂಟರ್ ಇರುವುದರಿಂದ ಸಾರ್ವಜನಿಕರು ತಿಂಗಳ ಮುಂಚಿತವಾಗಿ ಟೋಕನ್ ಪಡೆಯಬೇಕು. ಎರಡು ದಿನದಿಂದ ನೆಟ್ವರ್ಕ್ ಸಮಸ್ಯೆ ಇರುವುದರಿಂದಾಗಿ ಟೋಕನ್ ಪಡೆದ ನೂರಾರು ಜನ ಬ್ಯಾಂಕ್ ಎದುರು ಸರದಿಯಲ್ಲಿ ನಿಲ್ಲುವಂತಾಗಿದೆ.
ಪಟ್ಟಣದ ಅಂಚೆ ಕಚೇರಿ ಯಲ್ಲಿ ತೆರೆದಿದ್ದ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ತಾಂತ್ರಿಕ ಸಮಸ್ಯೆಯಿಂದಾಗಿ ಒಂದು ವಾರದಿಂದ ಬಂದ್ ಆಗಿದೆ. ತಾಲೂಕಿನಾದ್ಯಂತ ಎಸ್‌ಬಿಐನಲ್ಲಿ ಮಾತ್ರ ಇದೆ. ಹೊಸದಾಗಿ ನೋಂದಣಿ, ಹೆಸರು, ಮೊಬೈಲ್, ಅಡ್ರೆಸ್ ತಿದ್ದುಪಡಿಗಾಗಿ ನೂರಾರು ಜನರು ಸಂಜೆವರೆಗೆ ನಡು ರಸ್ತೆಯಲ್ಲಿ ಸಾಲಾಗಿ ನಿಲ್ಲಬೇಕಾಗಿದೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಏಕಾಏಕಿ ಬಂದ್ ಆದರೆ ಬೆಳಗ್ಗೆಯಿಂದ ಸಂಜೆವರೆಗೂ ನಿಂತರೂ ಕೆಲಸವಾಗದೇ ವಾಪಸ್ ಹೋಗಬೇಕಿದೆ. ಹೀಗಾಗಿ ಗ್ರಾಮೀಣ ಜನರು ನಿತ್ಯ ಅಲೆದಾಡುವಂತಾಗಿದೆ.
ತಾಲೂಕು ಆಡಳಿತ ಮೌನ: ತಾಲೂಕಿನಾದ್ಯಂತ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಮಾತ್ರ ಇದೆ. ಜಾಲಹಳ್ಳಿ, ಅಂಚೆ ಕಚೇರಿ ಸೇರಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತವಾಗಿದೆ. ಇಲ್ಲಿನ ತಾಲೂಕು ಆಡಳಿತ ನಾಲ್ಕು ಹೋಬಳಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ತೆರೆಯಲು ಮುಂದಾಗಿಲ್ಲ. ಕೂಡಲೇ ಹೋಬಳಿ ಸೇರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.