Advertisement

ಮುಂಗಾರಿನಲ್ಲಿ 1,08,782 ಹೆಕ್ಟೇರ್‌ ಬಿತ್ತನೆ ಗುರಿ

04:50 PM May 22, 2020 | Naveen |

ದೇವದುರ್ಗ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಪಟ್ಟಣ ಸೇರಿ ತಾಲೂಕಿನಾದ್ಯಂತ ನೀರಾವರಿ ಮತ್ತು ಖುಷ್ಕಿ 1,08,782 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

Advertisement

ಕೃಷಿ ಇಲಾಖೆಯಿಂದ ಈಗಾಗಲೇ ಬೀಜ ಪೂರೈಕೆಗೆ ಪ್ರಸ್ತಾವನೆ ಕಳಿಸಲಾಗಿದೆ. ವಾರದಲ್ಲಿ ನಾಲ್ಕು ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಪೂರೈಕೆಯಾಗಲಿದೆ. ತೊಗರಿ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಸರ್ಕಾರದಿಂದ ಇನ್ನೂ ಪೂರೈಕೆಯಾಗಿಲ್ಲ. ಮುಂಗಾರು ಹಂಗಾಮಿನಲ್ಲಿ ಖುಷ್ಕಿ ಪ್ರದೇಶದಲ್ಲಿ 40,882, ನೀರಾವರಿ 67,900 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ತೊಗರಿ, ಭತ್ತ, ಹೆಸರು, ಜೋಳ, ಕಡಲೆ, ನವಣೆ, ಸಜ್ಜೆ, ಸೂರ್ಯಕಾಂತಿ ಸೇರಿ ಇತರೆ ಬೀಜ ಪೂರೈಸುವಂತೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಇಷ್ಟೊತ್ತಿಗಾಗಲೇ ಬೀಜ ಪೂರೈಕೆಗೆ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಕೋವಿಡ್ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಪೂರೈಕೆಗೆ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಪಟ್ಟಣದಲ್ಲಿ ಭತ್ತ ನೀರಾವರಿ 5097, ಗಬ್ಬೂರು 7140, ಜಾಲಹಳ್ಳಿ 9657, ಅರಕೇರಾ 7127, ತೊಗರಿ ಪಟ್ಟಣ ಖುಷ್ಕಿ ಪ್ರದೇಶದ 2900, ನೀರಾವರಿ 44, ಗಬ್ಬೂರು ಖುಷ್ಕಿ ಪ್ರದೇಶ 6986, ನೀರಾವರಿ 921, ಜಾಲಹಳ್ಳಿ ಖುಷ್ಕಿ ಪ್ರದೇಶ 7350, ನೀರಾವರಿ 276, ಅರಕೇರಾ 3060 ಖುಷ್ಕಿ ನೀರಾವರಿ 207 ಹೆಕ್ಟೇರ್
ಪ್ರದೇಶದಲ್ಲಿ ಗುರಿ ಹೊಂದಲಾಗಿದೆ. ಹೆಸರು, ಜೋಳ, ಶೇಂಗಾ, ಸೂರ್ಯಕಾಂತಿ, ಅಲಸಂದಿ, ಹುರಳಿ ಸೇರಿ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತುವ ಸಾಧ್ಯತೆ ಇದೆ.

ನಕಲಿ ಬೀಜ ಪೂರೈಕೆಯಾಗದಂತೆ ಕ್ರಮ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಕಲಿ ಬೀಜ ಪೂರೈಸುವ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಆಂಧ್ರ ಪ್ರದೇಶದಿಂದ ನಕಲಿ ಬೀಜ, ರಸಗೂಬ್ಬರ ಪೂರೈಸುವ ಪ್ರಕರಣಗಳು ಪತ್ತೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಸಿದ್ಧತೆಯಲ್ಲಿ ತೊಡಗಿದ ರೈತರಿಗೆ ನಕಲಿ ಬೀಜಗಳು ಸರಬುರಾಜು ಆಗದಂತೆ ಇಲ್ಲಿನ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ. ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಪಟ್ಟಣ, ಜಾಲಹಳ್ಳಿ, ಗಬ್ಬೂರು, ಅರಕೇರಾ, ಗಲಗ ಸೇರಿದಂತೆ ಹಳ್ಳಿಗಳಲ್ಲಿ ರೈತರು ಹೊಲ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆಯಲ್ಲಿದ್ದಾರೆ. ಆದರೆ ರೈತರು ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ನಿತ್ಯ ಹೋಗಿ ವಾಪಸ್‌ ಬರುವಂತಾಗಿದೆ ಎನ್ನುತ್ತಾರೆ ರೈತ ಶಿವಪ್ಪ, ಭೀಮಪ್ಪ.

ಮುಂಗಾರು ಹಂಗಾಮು ಬಿತ್ತನೆಗೆ ಬೇಕಾಗುವ ಬೀಜಗಳ ಪೂರೈಕೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಿತ್ತನೆ ಕುರಿತು ಈಗಾಗಾಲೇ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಬೇರೆ ರಾಜ್ಯದ ಮಧ್ಯವರ್ತಿಗಳಿಂದ ಬೀಜ ಖರೀದಿ ಮಾಡಬಾರದು ಎಂದು ಅರಿವು ಮೂಡಿಸಲಾಗಿದೆ.
ಡಾ| ಎಸ್‌. ಪ್ರಿಯಾಂಕ್‌,
ಸಹಾಯಕ ಕೃಷಿ ನಿರ್ದೇಶಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next