Advertisement

ಅಲೆಮಾರಿಗಳಿಗೆ ಸೂರು ಭಾಗ್ಯ

12:20 PM Dec 13, 2019 | Naveen |

„ನಾಗರಾಜ ತೇಲ್ಕರ್‌
ದೇವದುರ್ಗ:
ಕಳೆದ 30 ವರ್ಷಗಳಿಂದ ಅಲೆಮಾರಿ ನಿವಾಸಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಸ್ವಂತ ಸೂರು ಹೊಂದುವ ಕನಸು ಸನ್ನಿಹಿತವಾಗಿದೆ. ಪಟ್ಟಣದ ಮಾಳಗಡ್ಡೆಯಲ್ಲಿ ಕಳೆದ 30 ವರ್ಷಗಳಿಂದ 257 ಅಲೆಮಾರಿ ಕುಟುಂಬಗಳು ವಾಸಿಸುತ್ತಿವೆ. ತಮಗೆ ಹಕ್ಕುಪತ್ರ ವಿತರಣೆ ಜತೆಗೆ ಮನೆ ನಿರ್ಮಿಸಿಕೊಡುವಂತೆ ಅಲೆಮಾರಿಗಳು ಹೋರಾಟ ಮಾಡುತ್ತ ಬಂದಿದ್ದರು. ಇವರ ಹೋರಾಟದ ಫಲವಾಗಿ ಮಾಳಗಡ್ಡೆಯಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Advertisement

ಅಲೆಮಾರಿಗಳು ವಾಸಿಸುತ್ತಿರುವ ಜಮೀನಿನ ಸಮತಟ್ಟು ಕಾರ್ಯ ಭರದಿಂದ ಸಾಗಿದೆ. ಡಾ| ಬಿ.ಆರ್‌. ಅಂಬೇಡ್ಕರ್‌ ನಿಗಮದಿಂದ ಪ್ರತಿ ಮನೆಗೆ ಐದೂವರೆ ಲಕ್ಷ ರೂ. ಬಿಡುಗಡೆಯಾಗಿದೆ. ಗುಡಿಸಲಲ್ಲಿ ವಾಸ: ಮಾಳಗಡ್ಡೆ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ 257 ಅಲೆಮಾರಿ ಕುಟುಂಬಗಳು ಹರಕು, ಮುರುಕು ಗುಡಿಸಲಲ್ಲಿ ವಾಸಿಸುತ್ತಿದ್ದರು. ಮಳೆ, ಚಳಿ, ಬಿಸಿಲೆನ್ನದೇ ಬಯಲಲ್ಲೇ ಗುಡಿಸಲಿನಲ್ಲಿ ಜೀವನದ ಬಂಡಿ ದೂಡುತ್ತಿದ್ದರು. ವಿಷಜಂತುಗಳ ಭಯದಲ್ಲೇ ಮಕ್ಕಳು ಮರಿಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಇದೀಗ ಇವರಿಗೆ ಹಕ್ಕುಪತ್ರ ವಿತರಣೆ ಜೊತೆಗೆ ಡಾ| ಬಿ.ಆರ್‌.ಅಂಬೇಡ್ಕರ್‌ ನಿಗಮದಿಂದ ಮನೆ ನಿರ್ಮಿಸಿಕೊಡಲಾಗುತ್ತಿದೆ. ಇದರೊಂದಿಗೆ ಕತ್ತಲಲ್ಲಿ ಬದುಕು ಸಾಗಿಸುವ ಕುಟುಂಬಗಳ ಬಾಳಲ್ಲಿ ಬೆಳಕು ಹರಿದಂತಾಗಿದೆ.

ಅಲೆಮಾರಿಗಳ ಸ್ಥಳಾಂತರ: ಮಾಳಗಡ್ಡೆಯಲ್ಲಿ ನೆಲೆಸಿರುವ ನೂರಾರು ಅಲೆಮಾರಿ ಕುಟುಂಬಗಳಿಗೆ ಮನೆಗಳ ನಿರ್ಮಾಣಕ್ಕಾಗಿ ಜಮೀನು ಸಮತಟ್ಟು ಮಾಡುತ್ತಿರುವುದರಿಂದ ಇಲ್ಲಿನ ಅಲೆಮಾರಿಗಳನ್ನು ಯಲ್ಲಾಲಿಂಗ ಕಾಲೋನಿಗೆ ಸ್ಥಳಾಂತರ ಮಾಡಲಾಗಿದೆ. ಕೆಲ ನಿವಾಸಿಗಳು ಖಾಲಿ ಇರುವ ಭೂಮಿಯಲ್ಲಿ ಮಾಲೀಕರಿಗೆ ಮನವಿ ಮಾಡಿಕೊಂಡು ತಾತ್ಕಾಲಿಕ ಶೆಡ್‌ ಹಾಕಿಕೊಂಡಿದ್ದಾರೆ. ಮನೆಗಳು ನಿರ್ಮಾಣ ಆಗುವವರೆಗೆ ಅನಿವಾರ್ಯವಾಗಿ ಬೇರೆಡೆ ಅವ್ಯವಸ್ಥೆಯ ಮಧ್ಯೆ ವಾಸಿಸಬೇಕಾಗಿದೆ ಎಂದು ಅಲೆಮಾರಿ ರಂಗಮ್ಮ ನೋವು ವ್ಯಕ್ತಪಡಿಸಿದರು.

ಪ್ರತಿ ಮನೆಗೆ ಐದೂವರೆ ಲಕ್ಷ: 257 ಅಲೆಮಾರಿ ಕುಟುಂಬಗಳಿಗೆ ಮನೆಗಳ ನಿರ್ಮಾಣಕ್ಕೆ ಡಾ| ಬಿ.ಆರ್‌. ಅಂಬೇಡ್ಕರ್‌ ನಿಗಮ ಪ್ರತಿ ಮನೆಗೆ 5.50 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ. ಅವರ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಳ್ಳಲು ಫಲಾನುಭವಿಗಳ ಖಾತೆಗೆ ನಿಗಮದಿಂದ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ಈಗಾಗಲೇ 257 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ.

ನಿವೇಶನ ಸಮತಟ್ಟು: ಮಾಳಗಡ್ಡಿ ಪ್ರದೇಶದಲ್ಲಿ ಎರಡು ಎಕರೆ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಮಾಳಗಡ್ಡೆ ಸಮತಟ್ಟು ಕೆಲಸ ಭರದಿಂದ ಸಾಗಿದೆ. ನಿವೇಶನ ಸಮಾನಂತರಗೊಳಿಸಲು ರಾಜ್ಯ ಸರಕಾರ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಭೂಮಿ ಸಮತಟ್ಟು ಮಾಡುವ ಹೊಣೆಯನ್ನು ಲ್ಯಾಂಡ್‌ ಆರ್ಮಿಗೆ ವಹಿಸಲಾಗಿದೆ. ಜೆಸಿಬಿಯಿಂದ ಸಮತಟ್ಟು ಮಾಡಲಾಗುತ್ತಿದೆ. ಭೂಮಿ ಸಮತಟ್ಟು ಮಾಡಿದ ನಂತರ ಮನೆಗಳ ನಿರ್ಮಾಣ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ವಿದ್ಯುತ್‌ ಸ್ಥಗಿತಕ್ಕೆ ಜೆಸ್ಕಾಂ ನಕಾರ
ಮಾಳಗಡ್ಡೆ ಎರಡು ಎಕರೆ ಭೂಮಿ ಸಮತಟ್ಟು ಮಾಡಲು ಜೆಸಿಬಿ ಯಂತ್ರಕ್ಕೆ ವಿದ್ಯುತ್‌ ತಂತಿಗಳು ಅಡ್ಡಿಯಾಗುತ್ತಿವೆ. ಹೀಗಾಗಿ ಹಗಲಿನಲ್ಲಿ ವಿದ್ಯುತ್‌ ಸ್ಥಗಿತಗೊಳಿಸುವಂತೆ ಲ್ಯಾಂರ್ಡ್‌ ಆರ್ಮಿ ಅಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಅಲೆಮಾರಿಗಳು ವಿದ್ಯುತ್‌ ಬಾಕಿ ಬಿಲ್‌ ಪಾವತಿಸುವವರೆಗೆ ವಿದ್ಯುತ್‌ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಜಮೀನು ಸಮತಟ್ಟು ವೇಳೆ ಜೆಸಿಬಿ ಯಂತ್ರ ಚಾಲಕರು ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ.

ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಎರಡು ಎಕರೆ ಭೂಮಿ ಸಮತಟ್ಟು ಮಾಡಲು 25 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ವಿದ್ಯುತ್‌ ಸ್ಥಗಿತಗೊಳಿಸಲು ಜೆಸ್ಕಾಂ ಅಧಿಕಾರಿಗಳು ವಿನಾಕಾರಣ ಸಮಸ್ಯೆ ಮಾಡುತ್ತಿದ್ದಾರೆ. ಎರಡು ದಿನದಲ್ಲಿ ಕೆಲಸ ಮುಗಿಸಲಾಗುತ್ತದೆ.
ಬಸವರಾಜ ರಾಠೊಡ,
ಲ್ಯಾಂಡ್‌ ಆರ್ಮಿ ಎಇಇ

ಸುಮಾರು ವರ್ಷಗಳಿಂದ ಹಕ್ಕು ಪತ್ರಗಳಿಗಾಗಿ ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರಕಾರ 257 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಡಾ| ಬಿ.ಆರ್‌. ಅಂಬೇಡ್ಕರ್‌ ನಿಗಮದಿಂದ ಹಣ ಬಿಡುಗಡೆ ಮಾಡಿದೆ. ಶಾಸಕರ ಇಚ್ಛಾಶಕ್ತಿಯಿಂದ ನಮ್ಮ ಅಲೆಮಾರಿ ಜನಾಂಗಕ್ಕೆ ಶಾಶ್ವತ ಸೂರು ಸಿಕ್ಕಿದೆ.
ರಾಮಕೃಷ್ಣ,
ಪುರಸಭೆ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next