Advertisement

ಅವ್ಯವಸ್ಥೆ ಮಧ್ಯೆ ದ್ವಿತೀಯ ಪಿಯು ಪೂರಕ ಪರೀಕ್ಷೆ

11:12 AM Jun 13, 2019 | Naveen |

ದೇವದುರ್ಗ: ನೋಂದಣಿ ಸಂಖ್ಯೆ ಹುಡುಕಾಟಕ್ಕಾಗಿ ವಿದ್ಯಾರ್ಥಿಗಳ ಪರದಾಟ, ಪರೀಕ್ಷೆ ಆರಂಭವಾದರೂ ಬಾರದ ಹಾಲ್ ಟಿಕೆಟ್, ಪರೀಕ್ಷೆ ನಡೆಯುತ್ತಿರುವಾಗಲೇ ಆಸನ ವ್ಯವಸ್ಥೆ, ಕೊಠಡಿಗಳಲ್ಲಿ ನೆಲದಲ್ಲಿ ಒಬ್ಬರ ಪಕ್ಕ ಒಬ್ಬರು ನೆಲದಲ್ಲಿ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಕೊಠಡಿ ಮೇಲ್ವಿಚಾರಕರೇ ಗೈರಾಗಿದ್ದರಿಂದ ಉಪನ್ಯಾಸಕರನ್ನು ಕರೆತಂದು ಕೊಠಡಿ ಮೇಲ್ವಿಚಾರಕರನ್ನಾಗಿ ನಿಯೋಜನೆ..

Advertisement

ಇದು ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್‌ ವಿಷಯದ ಪೂರಕ ಪರೀಕ್ಷೆ ಕಂಡುಬಂದ ದೃಶ್ಯ. ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ದ್ವಿತೀಯ ಪಿಯು ಇಂಗ್ಲಿಷ್‌ ವಿಷಯದ ಪೂರಕ ಪರೀಕ್ಷೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು.

ಇಂಗ್ಲಿಷ್‌ ವಿಷಯದ ಪರೀಕ್ಷೆಗೆ ತಾಲೂಕಿನ ವಿವಿಧ ಖಾಸಗಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 688 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 41 ವಿದ್ಯಾರ್ಥಿಗಳು ಗೈರಾಗಿದ್ದರು. ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದೇ ಪರೀಕ್ಷೆ ಕೇಂದ್ರ ತೆರೆದಿದ್ದು ಸಮಸ್ಯೆಗೆ ಕಾರಣವಾಗಿತ್ತು.

ಕೊಠಡಿ ಕೊರತೆ: ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಮತ್ತು ಡೆಸ್ಕ್ಗಳ ಕೊರತೆ ಎದುರಾಗಿತ್ತು. ಹೀಗಾಗಿ ಕೆಲ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ್ದರೆ ಮತ್ತೇ ಕೆಲ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ನೆಲದಲ್ಲೇ ಒಬ್ಬರ ಪಕ್ಕ ಒಬ್ಬರನ್ನು ಕೂಡಿಸಿ ಪರೀಕ್ಷೆ ಬರೆಯಿಸಲಾಗಿದೆ. ಪರೀಕ್ಷೆ ಆರಂಭವಾದರೂ 10:30ರ ಸುಮಾರಿಗೆ ಬೇರೆ ಶಾಲೆ-ಕಾಲೇಜುಗಳಿಂದ ಡೆಸ್ಕ್ ತರಿಸಿ ಹಾಕುವ ಕಾರ್ಯ ನಡೆದಿರುವುದು ಕಂಡುಬಂತು. ಕೊಠಡಿ ಸಾಲದ್ದರಿಂದ ಕೆಲ ವಿದ್ಯಾರ್ಥಿಗಳಿಗೆ ಶಾಲೆ ಹೊರಗಿನ ಕಟ್ಟೆ ಮೇಲೆ ಡೆಸ್ಕ್ ಹಾಕಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಪರೀಕ್ಷೆ ನಡೆದಾಗ ಹಾಲ್ ಟಿಕೆಟ್ ವಿತರಣೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕೆಲ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ನಲ್ಲಿ ತಪ್ಪಾಗಿದ್ದರಿಂದ ಸುಮಾರು ಎಂಟು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಾಗ 11 ಗಂಟೆ ಸುಮಾರಿಗೆ ಹಾಲ್ ಟಿಕೆಟ್ ವಿತರಿಸಲಾಯಿತು. ಆಯಾ ಕಾಲೇಜಿನವರೇ ಬೆಂಗಳೂರಿಗೆ ತೆರಳಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ನ್ನು ತೆಗೆದುಕೊಂಡು ಬಂದು ಬುಧವಾರ ಬೆಳಗ್ಗೆ ಪರೀಕ್ಷೆ ವೇಳೆಯಲ್ಲಿ ವಿತರಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಲ್ ಟಿಕೆಟ್ ಇರದಿದ್ದರೂ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ.

Advertisement

ಮೇಲ್ವಿಚಾರಕರೇ ಗೈರು: ಬಾಲಕರ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಸುಮಾರು 23 ಜನ ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಪರೀಕ್ಷೆ ಆರಂಭವಾದರೂ ಸುಮಾರು 10ಕ್ಕೂ ಹೆಚ್ಚು ಮೇಲ್ವಿಚಾರಕರು ಬಾರದ್ದರಿಂದ ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗಾಗಿ ಹುಡುಕಾಟ ನಡೆಸಲಾಯಿತು. ಕೊನೆಗೆ ಉಪನ್ಯಾಸಕರನ್ನು ಕರೆಸಿ ಕೊಠಡಿ ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಯಿತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಒಂದೇ ಬೋರ್ಡ್‌ಗೆ ನಂಬರ್‌: ಇಂಗ್ಲಿಷ್‌ ಪರೀಕ್ಷೆಗೆ 688 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಈ ವಿದ್ಯಾರ್ಥಿಗಳ ಆಸನ ಸಂಖ್ಯೆ ಯಾವ ಕೊಠಡಿಯಲ್ಲಿ ಬರಲಿದೆ ಎಂಬ ಮಾಹಿತಿಯನ್ನು ಒಂದೇ ಸೂಚನಾ ಫಲಕಕ್ಕೆ ಹಾಕಿದ್ದರಿಂದ ಪರೀಕ್ಷಾರ್ಥಿಗಳು ತಮ್ಮ ಸಂಖ್ಯೆ, ಕೊಠಡಿ ಹುಡುಕಾಡಲು ಪರದಾಡ ಬೇಕಾಯಿತು. ಒಬ್ಬರ ಮೇಲೊಬ್ಬರು ಬಿದ್ದು ನಂಬರ್‌ ತಿಳಿದುಕೊಳ್ಳಬೇಕಾಯಿತು. ಪರೀಕ್ಷಾ ಕೇಂದ್ರ ದಲ್ಲಿನ ಅವ್ಯವಸ್ಥೆ ನೋಡಿದ ಪಾಲಕರು, ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಹಿಡಿಶಾಪ ಹಾಕಿದರು. ಈ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಶಬ್ಬೀರ ಜಾಲಹಳ್ಳಿ ಆಗ್ರಹಿಸಿದ್ದಾರೆ.

ಇಂಗ್ಲಿಷ್‌ ಪರೀಕ್ಷೆಗೆ 365 ವಿದ್ಯಾರ್ಥಿ ಗೈರು
ರಾಯಚೂರು: ಜಿಲ್ಲಾದ್ಯಂತ ಬುಧವಾರ ನಡೆದ ದ್ವಿತೀಯ ಪಿಯು ಇಂಗ್ಲಿಷ್‌ ವಿಷಯದ ಪರೀಕ್ಷೆಗೆ 4,550 ವಿದ್ಯಾರ್ಥಿಗಳು ಹಾಜರಿದ್ದು, 365 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಯು ಮಂಡಳಿಯಲ್ಲಿ ಪರೀಕ್ಷೆ ಪ್ರವೇಶ ಪತ್ರ ಪೂರೈಕೆಯಲ್ಲಿ ವಿಳಂಬವಾಗಿದೆ. ಇಂಗ್ಲಿಷ್‌ ವಿಷಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಕಾರಣ ಕೊಠಡಿಗಳ ಸಮಸ್ಯೆ ಎದುರಾಗಿತ್ತು. ಹೀಗಾಗಿ ಹಾಲ್ನಲ್ಲಿ ಪರೀಕ್ಷೆ ನಡೆಸಲಾಯಿತು.
ಬಿ.ಎಸ್‌. ದೊಡ್ಡಮನಿ,
ಪ್ರಾಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next